ಬೆಂಗಳೂರು:ರಾಜ್ಯದ ಬಿಜೆಪಿ ಮುಖಂಡರು ತಮ್ಮ ಪಕ್ಷದ ವರಿಷ್ಠರನ್ನು ಮೆಚ್ಚಿಸಲು ನನ್ನ ರಾಜೀನಾಮೆ ಕೇಳುತ್ತಿದ್ದು, ಎಐಸಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರಿಗೆ ಮಸಿ ಬಳಿಯುವ ಸಂಚು ನಡೆಸಿದ್ದಾರೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ಗುತ್ತಿಗೆದಾರ ಸಚಿನ್ ಪಾಂಚಾಳ ಹಾಗೂ ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣಗಳಲ್ಲಿ ಹೋಲಿಕೆ ಇಲ್ಲ. ಆತ್ಮಹತ್ಯೆ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ. ಹಾಗಿದ್ದರೂ, ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಸಚಿನ್ ಪಾಂಚಾಳ ಮನೆಗೆ ಭೇಟಿಕೊಟ್ಟ ಬಿಜೆಪಿ ನಾಯಕರು, ಅವರ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಸಂತೋಷ್ ಪಾಟೀಲ ಮನೆಗೆ ಏಕೆ ಭೇಟಿ ಕೊಡಲಿಲ್ಲ ಈಗ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ’ ಎಂದು ದೂರಿದರು. ಮಣಿಕಂಠ ರಾಠೋಡ ಅವರ ಮೇಲೆ ಸುಮಾರು ೩೦ ಪ್ರಕರಣಗಳಿವೆ. ಬಿಜೆಪಿ ಅವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ. ಈಗ ಅವರ ನೇತೃತ್ವದಲ್ಲೇ ಕಲಬುರಗಿ ಚಲೋ ಹಮ್ಮಿಕೊಂಡಿದೆ ಎಂದು ಟೀಕಿಸಿದರು.
ಛಲವಾದಿ ನಾರಾಯಣಸ್ವಾಮಿ ಅವರಿಗೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಸ್ಥಾನ ಸಿಕ್ಕಿರುವುದೇ ನನ್ನ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ವೈಯಕ್ತಿಕ ಟೀಕೆ ಮಾಡುವುದಕ್ಕಾಗಿ. ನಾರಾಯಣಸ್ವಾಮಿ ಅವರು ನಮ್ಮ ವಿರುದ್ಧ ಟೀಕೆ ಮಾಡುವವರೆಗೂ ವಿರೋಧ ಪಕ್ಷದ ನಾಯಕರಾಗಿರುತ್ತಾರೆ’ ಎಂದರು.