ಬೆಂಗಳೂರು: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಹೋರಾಟವನ್ನು ತೀವ್ರಗೊಳಿಸಿದೆ. ಪ್ರಿಯಾಂಕ್ ಖರ್ಗೆ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿರುವ ವಿರೋಧ ಪಕ್ಷದ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಪ್ರಿಯಾಂಕ್ ಖರ್ಗೆ ವಿರುದ್ಧ ಪೋಸ್ಟರ್ ಅಭಿಯಾನ ಕೂಡ ನಡೆಸುತ್ತಿದ್ದಾರೆ.
ಕಾಂಗ್ರೆಸ್ ಸಚಿವರ ವಿರುದ್ಧ ಬೀದಿಗಿಳಿದಿರುವ ಛಲವಾದಿ ನಾರಾಯಣಸ್ವಾಮಿ, ಸಿ.ಟಿ.ರವಿ, ಎಂಎಲ್‌ಸಿ ರವಿಕುಮಾರ್ ಪ್ರಿಯಾಂಕ್ ಖರ್ಗೆ ವಿರುದ್ದ ಪೋಸ್ಟರ್ ಅಭಿಯಾನ ನಡೆಸುತ್ತಿದ್ದಾರೆ. ರೇಸ್ ಕೋರ್ಸ್ ರಸ್ತೆಯಲ್ಲಿ ಪೋಸ್ಟರ್ ಅಂಟಿಸಿದ ಬಿಜೆಪಿ ಕಾರ್ಯಕರ್ತರು, ಗುತ್ತಿಗೆದಾರನ ಸಾವಿಗೆ ಪ್ರಿಯಾಂಕ್ ಖರ್ಗೆ ಹೊಣೆಗಾರ ಎಂದು ಆರೋಪಿಸಿದ್ದಾರೆ.
‘ಖರ್ಗೆ ಪ್ರಾಯೋಜಿತ ಸುಪಾರಿ’
ಖರ್ಗೆ ಪ್ರಾಯೋಜಿತ ಸುಪಾರಿ ಎಂಬ ಪೋಸ್ಟರ್ ಅಂಟಿಸಿದ ಬಿಜೆಪಿ ನಾಯಕರು, ಪ್ರಿಯಾಂಕ್ ಖರ್ಗೆ, ಕಾಂಗ್ರೆಸ್ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಇದು ಭ್ರಷ್ಟಾಚಾರದಲ್ಲಿ ಮುಳುಗಿರುವ ಕೊಲೆಗಡುಕ ಸರ್ಕಾರ. ಯಾರು ಏನೇ ಮಾಡಿದರೂ ನಾವು ಕೇರ್ ಮಾಡಲ್ಲ ಅಂದುಕೊಂಡಿದ್ದಾರೆ. ಪ್ರಿಯಾಂಕ್ ಖರ್ಗೆ ಪಾತ್ರ ಇದೆಯೋ ಇಲ್ವೋ ತನಿಖೆಯಲ್ಲಿ ಗೊತ್ತಾಗಲಿದೆ. ಇದೊಂದು ಕರಪ್ಟ್ ಸರ್ಕಾರ ಅದಕ್ಕಾಗಿ ಪೋಸ್ಟರ್ ಅಂಟಿಸಿದ್ದೇವೆ. ರಾಜೀನಾಮೆ ಕೊಡುವವರೆಗೂ ಹೋರಾಟ ನಡೆದೇ ನಡೆಯುತ್ತೆ ಎಂದು ಹೇಳಿದರು.
ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಪೋಸ್ಟರ್ ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಪ್ರಿಯಾಂಕ್ ಖರ್ಗೆ ನಿವಾಸಕ್ಕೂ ಪೋಸ್ಟರ್ ಅಂಟಿಸುವ ಸಾಧ್ಯತೆ ಇದೆ, ಹೀಗಾಗಿ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಪ್ರಿಯಾಂಕ್ ಖರ್ಗೆ ಸರ್ಕಾರಿ ನಿವಾಸಕ್ಕೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.
ಆಧಾರ ರಹಿತ ಆರೋಪ ಎಂದ ಪರಮೇಶ್ವರ್
ಸಚಿನ್ ಆತ್ಮಹತ್ಯೆ ಕೇಸ್ ಅನ್ನು ಸಿಬಿಐಗೆ ವಹಿಸಲು ಜನವರಿ 3ರವರೆಗೆ ಬಿಜೆಪಿ ಗಡುವು ನೀಡಿರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಪರಮೇಶ್ವರ್, ಈಗಾಗಲೇ ಪ್ರಿಯಾಂಕ್ ಖರ್ಗೆ ತಮ್ಮ ಪಾತ್ರ ಇಲ್ಲ ಅಂತ ಸ್ಪಷ್ಟನೆ ಕೊಟ್ಟಿದ್ದಾರೆ. ಡೆತ್‌ನೋಟ್‌ನಲ್ಲೂ ಪ್ರಿಯಾಂಕ್ ಖರ್ಗೆ ಹೆಸರಿಲ್ಲ ಅಂದಿದ್ದಾರೆ. ಆದರೂ, ಅವರನ್ನು ಸಿಕ್ಕಿಸಲು ಬಿಜೆಪಿ ಪ್ರಯತ್ನ ಪಡ್ತಿದೆ, ಆಧಾರ ರಹಿತ ಆರೋಪ ಮಾಡುತ್ತಿದೆ. ಯಾವುದಾದರೂ ಆಧಾರ ಇರಬೇಕಲ್ಲ, ಸುಮ್ಮನೆ ದೂಷಣೆ ಸರಿಯಲ್ಲ. ಬಿಜೆಪಿ ಈ ಮಟ್ಟಕ್ಕೆ ಇಳಿಯಬಾರದು, ಅನಾವಶ್ಯಕವಾಗಿ ಪ್ರಿಯಾಂಕ್ ಖರ್ಗೆ ಮೇಲೆ ಆಪಾದನೆ ಮಾಡುತ್ತಿದೆ ಎಂದಿದ್ದಾರೆ.
‘ಪ್ರಿಯಾಂಕ್ ಖರ್ಗೆ ಟಾರ್ಗೆಟ್’
ಸಿಒಡಿಗೆ ಪ್ರಕರಣ ವಹಿಸಲಾಗಿದೆ, ತನಿಖೆ ವರದಿ ಬರಲಿ. ಹಣದ ವಿಚಾರ ನಾನು ಈಗ ಮಾತಾಡಲ್ಲ, ತನಿಖೆಯಲ್ಲಿ ಏನು ಬರುತ್ತೋ ನೋಡೋಣ ಎಂದರು. ಅಲ್ಲದೆ ಅನೇಕ ಬಾರಿ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ, ಜೆಡಿಎಸ್ ಪಕ್ಷದ ತಪ್ಪುಗಳನ್ನು ಹೇಳಿದ್ದಾರೆ. ಇದು ಬಿಜೆಪಿ, ಜೆಡಿಎಸ್ಗೆ ಸ್ವಾಭಾವಿಕವಾಗಿ ಹಿಡಿಸಿಲ್ಲ ಹೀಗಾಗಿ ಪ್ರಿಯಾಂಕ್ ಖರ್ಗೆಯವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಪರಮೇಶ್ವರ್ ಆರೋಪ ಮಾಡಿದರು.