ಪಿರಿಯಾಪಟ್ಟಣ: ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಕಾವೇರಿ ನೀರಿನ ವಿಚಾರದಲ್ಲಿ ಕನ್ನಡಿಗರಿಗೆ ದ್ರೋಹ ಮಾಡುತ್ತಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಎಂ.ಎಂ ರಾಜೇಗೌಡ ಆರೋಪಿಸಿದರು.
ಕರ್ನಾಟಕ ಬಂದ್ ಅಂಗವಾಗಿ ತಾಲೂಕು ಬಿಜೆಪಿ ಘಟಕ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಡಿಎಂಕೆ ಪಕ್ಷವನ್ನು ಓಲೈಸುವ ಸಲುವಾಗಿ ಕದ್ದು ಮುಚ್ಚಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ ತಕ್ಷಣ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಬೇಕು ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ರೂಪದ ಹೋರಾಟ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದರು.
ತಂಬಾಕು ಮಂಡಳಿ ಉಪಾಧ್ಯಕ್ಷ ಮಾಜಿ ಶಾಸಕರಾದ ಹೆಚ್.ಸಿ ಬಸವರಾಜು ಅವರು ಮಾತನಾಡಿ ಈ ಬಾರಿ ಮಳೆ ಅಭಾವದಿಂದ ಬರಗಾಲ ಹೆಚ್ಚಾಗಿ ಕರ್ನಾಟಕದಲ್ಲಿಯೇ ಕಾವೇರಿ ನದಿ ನೀರಿನ ಅಭಾವವಿದ್ದರೂ ತಮಿಳುನಾಡಿಗೆ ನೀರು ನೀಡುತ್ತಿರುವುದು ಖಂಡನೀಯ, ಶೀಘ್ರ ನದಿ ನೀರು ಹಂಚಿಕೆ ಸಂಬಂಧ ರಾಜ್ಯ ಸರ್ಕಾರ ಕನ್ನಡಿಗರ ಪರ ತೀರ್ಮಾನ ಕೈಗೊಳ್ಳಲಿ ಎಂದರು.
ಬಿಜೆಪಿ ಮುಖಂಡ ಕೌಲನಹಳ್ಳಿ ಸೋಮಶೇಖರ್ ಮಾತನಾಡಿ ಕರ್ನಾಟಕದಲ್ಲಿ ಕಾವೇರಿ ನದಿಯ ವಸ್ತುಸ್ಥಿತಿಯ ಬಗ್ಗೆ ವೈಜ್ಞಾನಿಕ ತಳಹದಿಯಲ್ಲಿ ವಾದ ಮಂಡಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲಾಗಿದೆ, 205 ಟಿಎಂಎಸ್ ನೀರು ಬಿಡಬೇಕು ಎಂಬ ಆದೇಶವಿದೆ ಆದರೆ ಯಾವ ಹಂತದಲ್ಲಿ ಬಿಡಬೇಕು ಮಳೆ ಬರದಂತಹ ಪರಿಸ್ಥಿತಿಯಲ್ಲಿ ನೀರು ಇಲ್ಲದಿರುವಾಗ ಏನು ಮಾಡಬೇಕು ಎಂಬುದನ್ನು ದೆಹಲಿಯ ಪ್ರಾಧಿಕಾರದ ಎದುರು ಸೂಕ್ತ ಮನವಿ ಸಲ್ಲಿಸಲು ವಿಫಲವಾಗಿದ್ದೇವೇ ಆದೇಶ ನಮ್ಮ ವಿರುದ್ಧ ಬಂದಿದೆ ಇದರಲ್ಲಿ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ ಧೋರಣೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ತಹಶಿಲ್ದಾರ್ ಕುಂ ಇ ಅಹಮದ್ ಅವರಿಗೆ ಮನವಿ ನೀಡಲಾಯಿತು, ಈ ಸಂದರ್ಭ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜೇಂದ್ರ, ಪ್ರಧಾನಕಾರ್ಯದರ್ಶಿ ಚಂದ್ರು, ವಿವಿಧ ಮೋರ್ಚ ಪದಾಧಿಕಾರಿಗಳಾದ ರವಿ, ನಳಿನಿ, ಚನ್ನಬಸವರಾಜು, ಪ್ರಸಾದ್, ಶುಭಾಗೌಡ, ಕಿರಂಗೂರು ಮೋಹನ್, ರಾಘವೇಂದ್ರ, ಸರಳಾ, ಭಾನು, ಲೋಕಪಾಲಯ್ಯ, ಟಿ.ರಮೇಶ್, ಅರುಣ್ ರಾಜೆ ಅರಸ್, ಚಂದ್ರನ್, ಎಂ.ಪಿ ರಾಜು, ಹರೀಶ್, ಕಿರಣ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.
