ಹೊಸಪೇಟೆ : ಮೆಕ್ಕೆಜೋಳ ಖರೀದಿ ಕೇಂದ್ರ ತಕ್ಷಣ ಆರಂಭಿಸಬೇಕು, ತುಂಗಭದ್ರಾ ಅಣೆಕಟ್ಟೆಗೆ ಶೀಘ್ರ ಗೇಟ್ ಅಳವಡಿಸಬೇಕು ಮೊದಲಾದ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಶಾಸಕ ಕೃಷ್ಣ ನಾಯ್ಕ್, ಮಾಜಿ ಸಚಿವರಾದ ರೇಣುಕಾಚಾರ್ಯ, ಕರುಣಾಕರ ರೆಡ್ಡಿ, ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ನಾಗರಾಜ್, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಸಂಜೀವ ರೆಡ್ಡಿ ನೇತೃತ್ವದಲ್ಲಿ ಪಾದಗಟ್ಟೆ ಆಂಜನೇಯ ದೇವಸ್ಥಾನ ಬಳಿಯಿಂದ ಆರಂಭವಾದ ಪ್ರತಿಭಟನೆ ಮೆರವಣಿಗೆ ಅಂಬೇಡ್ಕರ್ ವೃತ್ತದವರೆಗೂ ನಡೆಸಲಾಯಿತು.
ಈ ಕುರಿತು ತಹಸೀಲ್ದಾರ್ ಶ್ರುತಿ ಅವರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ಉಪಾಧ್ಯಕ್ಷ ಜೀವ ರತ್ನಂ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್.ರಾಘವೇಂದ್ರ ಇತರರು ಇದ್ದರು.
ಬೇಡಿಕೆಗಳು:
- ವಿಜಯನಗರ ಜಿಲ್ಲೆಯಲ್ಲಿ ರೈತರು ಬೆಳೆದ ಮೆಕ್ಕೆಜೋಳಕ್ಕೆ ಖರೀದಿ ಕೇಂದ್ರ ತೆಗೆಯಬೇಕು, ಪ್ರತಿ ರೈತರಿಂದ ಕನಿಷ್ಠ ಪಕ್ಷ 50 ಕ್ವಿಂಟಲ್ ಮೆಕ್ಕೆಜೋಳ ಖರೀದಿಸಿ ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಾಲಿಗೆ ಕೊಡುತ್ತಿರುವ 2400 ರೂ ಪ್ರೋತ್ಸಾಹ ಧನ ಜೊತೆಗೆ ಹೆಚ್ಚುವರಿಯಾಗಿ 600 ರೂ ಸೇರಿಸಿ ಒಟ್ಟು 3000 ಪ್ರೋತ್ಸಾಹ ಧನವನ್ನು ಕೊಡಬೇಕು.
- ತುಂಗಭದ್ರಾ ನದಿ ಆಣೆಕಟ್ಟಿನ ಗೇಟ್‌ಗಳ ದುರಸ್ತಿ ಕಾರ್ಯವನ್ನು ಶೀಘ್ರವಾಗಿ ಮುಗಿಸಿ ರೈತರಿಗೆ 2ನೇ ಬೆಳೆಗೆ ನೀರನ್ನು ಬಿಡಬೇಕು, ಸಾಧ್ಯವಾಗದಿದ್ದರೆ ಪ್ರತಿ ಎಕರೆಗೆ ₹25000 ಪರಿಹಾರ ಧನವನ್ನು ನೀಡಬೇಕು.
- ಹೊಸಪೇಟೆಯಲ್ಲಿ ರೈತರಿಗೆ ಅತ್ಯವಶ್ಯಕವಾಗಿರುವ ಸಕ್ಕರೆ ಕಾರ್ಖಾನೆಯನ್ನು ಶೀಘ್ರವಾಗಿ ಪ್ರಾರಂಭಿಸಬೇಕು.
- ರೇಷ್ಮೆ ಬೆಳೆ ಹೆಚ್ಚಾಗಿ ಬೆಳೆಯುತ್ತಿರುವ ರೈತರ ಅನುಕೂಲಕ್ಕಾಗಿ ರೇಷ್ಮೆ ಮಾರುಕಟ್ಟೆ ತೆರೆಯಬೇಕು.
- ಬಾಳೆ ಬೆಳೆಗೆ ಬೆಂಬಲ ಬೆಲೆ ಕೊಡಬೇಕು.
- ಪದವಿಯಲ್ಲಿ ವಿದ್ಯಾಭ್ಯಾಸ ಮಾಡುವ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ಉಚಿತ ಶಿಕ್ಷಣ ನೀಡಬೇಕು.
- ಈರುಳ್ಳಿ ಬೆಳೆಗಾರರ ನಷ್ಟ ಪರಿಹಾರವನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕು.
- ಹಾಲಿನ ಪ್ರೋತ್ಸಾಹ ಧನವನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕು.
- ಜಿಲ್ಲೆಯಲ್ಲಿ ಭತ್ತದ ಖರೀದಿ ಕೇಂದ್ರವನ್ನು ಪ್ರಾರಂಭಿಸಬೇಕು.
- ಈ ಹಿಂದೆ ಕೇಂದ್ರ ಸರ್ಕಾರದ ಜೊತೆಗೆ ರಾಜ್ಯ ಸರ್ಕಾರವು ಕೃಷಿ ಸಮ್ಮಾನ್ ಯೋಜನೆಯಲ್ಲಿ 4000 ಹಣ ನೀಡುತ್ತಿತ್ತು, ಅದನ್ನು ಪುನಃ ಪ್ರಾರಂಭಿಸಬೇಕು ಎಂಬ ಬೇಡಿಕೆಗಳನ್ನು ಸಲ್ಲಿಸಿದರು.



