Monday, April 21, 2025
Google search engine

Homeಸ್ಥಳೀಯಗ್ಯಾರಂಟಿ ಗೊಂದಲಗಳ ವಿರುದ್ದ ಬಿಜೆಪಿ ಪ್ರತಿಭಟನೆ

ಗ್ಯಾರಂಟಿ ಗೊಂದಲಗಳ ವಿರುದ್ದ ಬಿಜೆಪಿ ಪ್ರತಿಭಟನೆ


ಮೈಸೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿನ ಗೊಂದಲಗಳ ವಿರುದ್ಧ ನಗರ ಹಾಗೂ ಗ್ರಾಮಾಂತರ ಬಿಜೆಪಿ ವತಿಯಿಂದ ಜಿಲ್ಲಾ ಪಂಚಾಯತ್ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಸುಳ್ಳು ಗ್ಯಾರಂಟಿಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಇದೀಗ ಗ್ಯಾರಂಟಿಗಳ ಜಾರಿಗೆ ಒದ್ದಾಡುತ್ತಿದೆ. ಯೋಜನೆ ಜಾರಿಯಲ್ಲಿ ಹಲವು ಗೊಂದಲಗಳಿದ್ದು, ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ವಿದ್ಯುತ್ ದರ ಏರಿಕೆಯಿಂದ ಜನ ಕಂಗಾಲಾಗಿದ್ದಾರೆ. ಅನ್ನಭಾಗ್ಯಕ್ಕೆ ಅಕ್ಕಿ ಹೊಂದಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ೨೦೦ ಯೂನಿಟ್ ಉಚಿತ ಎಂದು ಹೇಳಿ ಇದೀಗ ಷರತ್ತು ವಿಧಿಸಲಾಗಿದೆ. ಈ ಮೂಲಕ ಸಿದ್ದರಾಮಯ್ಯ ಸುಳ್ಳುರಾಮಯ್ಯ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಕಿಡಿ ಕಾರಿದರು.
ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಅಕ್ಕಿ ಕೊಡುತ್ತಿಲ್ಲ ಎಂದು ಕಾಂಗ್ರೆಸ್ ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದು ನಾವೂ ಸಹ ರಾಜ್ಯ ಸರ್ಕಾರದ ಗ್ಯಾರಂಟಿಗಳ ಗೊಂದಲದ ಕುರಿತು ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್‌ನವರು ಕೇಂದ್ರದ ಅನುಮತಿ ಕೇಳಿ ಗ್ಯಾರಂಟಿ ಕೊಟ್ಟಿದ್ದಾರಾ. ಹೇಳದೆ ಕೇಳದೆ ಕೊಟ್ಟು ಈಗ ಕೊಡಲಾಗದೆ ಕೇಂದ್ರದ ವಿರುದ್ಧ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಆದರೆ, ಜನಪರ ಕೆಲಸಗಳಲ್ಲಿ ಕೇಂದ್ರ ಸರ್ಕಾರ ರಾಜಕಾರಣ ಮಾಡುವುದಿಲ್ಲ. ಐದು ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಟ್ಟರೂ ಉಳಿದ ಐದು ಕೆಜಿ ಅಕ್ಕಿ ಹೊಂದಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಗ್ಯಾರಂಟಿಗಳನ್ನು ಜಾರಿ ಮಾಡಲಾಗದೆ ಅದನ್ನು ಮರೆಮಾಚಲು ಈ ರೀತಿ ಮಾಡುತ್ತಿದ್ದಾರೆ. ಸ್ತ್ರೀ ಶಕ್ತಿ ಯೋಜನೆಯಿಂದ ಪ್ರತಿದಿನ ಒಂದಲ್ಲಾ ಒಂದು ಸಮಸ್ಯೆ ಆಗುತ್ತಿದೆ. ಗೃಹಜ್ಯೋತಿ ಯೋಜನೆಯೂ ಸರಿಯಾಗಿ ಜಾರಿಯಾಗಿಲ್ಲ. ಪದವೀಧರ ನಿರುದ್ಯೋಗಿ ಯುವಕ, ಯುವತಿಯರಿಗೆ ಅನ್ಯಾಯವಾಗುತ್ತಿದೆ. ಮುಂಬರುವ ದಿನಗಳಲ್ಲಿ ತಾಲೂಕು, ವಾರ್ಡ್ ಮಟ್ಟದಲ್ಲಿ ಹೋರಾಟ ಮಾಡಿ ಸರ್ಕಾರದ ಈ ಗೊಂದಲಗಳನ್ನು ಮನೆ ಮನೆಗೆ ಮುಟ್ಟಿಸುವ ಕೆಲಸ ಮಾಡುತ್ತೇವೆ ಎಂದರು.
ಮಾಜಿ ಶಾಸಕ ಎಲ್.ನಾಗೇಂದ್ರ ಮಾತನಾಡಿ, ಸಿದ್ದರಾಮಯ್ಯ ಅವರು ಕೇಂದ್ರದಿಂದ ೫ ಕೆಜಿ ಅಕ್ಕಿಯನ್ನು ಉಚಿತವಾಗಿ ಪಡೆದುಕೊಂಡು, ಉಳಿದ ಅಕ್ಕಿಯನ್ನೂ ಕೇಂದ್ರದಿಂದಲೇ ಕೇಳುತ್ತಿದ್ದಾರೆ. ಬಿಜೆಪಿಯವರೇ ಒತ್ತಡ ಹೇರಿ ಅಕ್ಕಿ ಕೊಡಿಸಿ ಎನ್ನುತ್ತಾರೆ. ಆದರೆ, ಬಿಜೆಪಿ ಸಂಸದರನ್ನು ಕೇಳಿ ಅಕ್ಕಿ ಕೊಡುತ್ತೇನೆ ಎಂದು ಒಪ್ಪಿಕೊಂಡಿದ್ದಾರಾ? ಅಕ್ಕಿ ಬದಲಿಗೆ ಬೇರೆ ಧಾನ್ಯ ನೀಡತ್ತೇವೆ ಎಂದು ಹೇಳಲು ನಾಚಿಕೆಯಾಗುವುದಿಲ್ಲವೆ? ಗ್ಯಾರಂಟಿ ಯೋಜನೆಗಳಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಇಬ್ಬರು ಬಸ್ಸಿನಿಂದ ಬಿದ್ದು ಸತ್ತಿದ್ದಾರೆ. ರಾಜ್ಯದ ಮಾನ ದೇಶದೆಲ್ಲೆಡೆ ಹರಾಜಾಗುತ್ತಿದೆ. ಟೊಳ್ಳು ಭರವಸೆಗಳನ್ನು ನಂಬಿ ಕಾಂಗ್ರೆಸ್‌ಗೆ ಅಧಿಕಾರ ನೀಡಿದ ಜನರಿಗೆ ಭ್ರಮನಿರಸನವಾಗಿದೆ. ಕಾಂಗ್ರೆಸ್‌ಗೆ ಅಕ್ಕಿ ಕೊಡಲು ಸಾಧ್ಯವಾಗದಿದ್ದರೆ ಜನರ ಮುಂದೆ ತಪ್ಪಾಯಿತೆಂದು ಒಪ್ಪಿಕೊಳ್ಳಲಿ. ಸರ್ಕಾರ ಎಲ್ಲಾ ಗ್ಯಾರಂಟಿಗಳನ್ನು ಪೂರ್ಣವಾಗಿ ಜಾರಿಗೊಳಿಸುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಂ.ರಾಜೇಂದ್ರ, ಪ್ರಭಾರಿ ಮೈವಿ ಬಿ.ಪಿ.ರವಿಶಂಕರ್ ಮಾಜಿ ಮೇಯರ್ ಸಂದೇಶ್‌ಸ್ವಾಮಿ, ಗ್ರಾಮಾಂತರ ಅಧ್ಯಕ್ಷೆ ಮಂಗಳಾ ಸೋಮಶೇಖರ್, ಮುಖಂಡರಾದ ಬಿ.ಪಿ.ಮಂಜುನಾಥ್, ಗಿರಿಧರ್, ದೇವನೂರು ಪ್ರತಾಪ್, ಜಗದೀಶ್, ಗೋಕುಲ್ ಗೋವರ್ಧನ್, ಗಿರೀಶ್ ಗೌಡ, ಜೋಗಿ ಮಂಜು ಸೇರಿದಂತೆ ಹಲವರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular