ಮಂಡ್ಯ: ರಾಜ್ಯಪಾಲರ ಪ್ರಾಸಿಕ್ಯೂಷನ್ ಗೆ ಹೈಕೋರ್ಟ್ ತಡೆ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಮಂಡ್ಯದ ಸಂಜಯ ವೃತ್ತದಲ್ಲಿ ಪ್ರತಿಭಟನೆ ನಡೆಸಿ,ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ಮಾತನಾಡಿ, ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ಅಂದೇ ರಾಜೀನಾಮೆ ನೀಡಬೇಕಿತ್ತು, ಕಾನೂನಿಗೆ ಬೆಲೆ ಕೊಡದೆ ಸಂವಿಧಾನ ವಿರೋಧಿ ನಡೆ ಅನುಸರಿಸಿ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷವು ಸಂವಿಧಾನಕ್ಕೆ ಗೌರವ ಕೊಡುತ್ತದೆ ಎನ್ನುತ್ತಾರೆ. ಆದರೆ, ರಾಜ್ಯಪಾಲರು ಸಂವಿಧಾನ ಪರವಾಗಿರುವ ವಿಚಾರವನ್ನು ಬೀದಿಗೆಳೆದು ಅವರ ವಿರುದ್ಧವೇ ಅಪಮಾನ ಮಾಡುವಂತೆ ಕಾಂಗ್ರೆಸ್ ಮುಖಂಡರ ಹೇಳಿಕೆ ಖಂಡನೀಯ ಎಂದರು.
ಮುಖ್ಯಮಂತ್ರಿ ಅವರ ಮೇಲ್ಮನವಿ ಅರ್ಜಿ ವಜಾ ಮಾಡಿ ಹೈಕೋರ್ಟ್ ನೀಡಿರುವ ತೀರ್ಪು ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯವಾಗಿದೆ. ಸಿದ್ದರಾಮಯ್ಯ ಅವರ ತನಿಖೆಗೆ ಆದೇಶ ನೀಡಿದ ರಾಜ್ಯಪಾಲರ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿರುವುದು ಸ್ವಾಗತಾರ್ಹವಾಗಿದೆ ಎಂದರು.
ಪ್ರತಿಭಟನೆಯಲ್ಲಿ ಮುಖಂಡರಾದ ಅರವಿಂದ್, ಮಂಜುನಾಥ್, ಡಾ. ಸದಾನಂದ, ಆನಂದ್, ಟಿ.ಎಸ್. ವಿವೇಕ್ ಮತ್ತಿತರರು ಭಾಗವಹಿಸಿದ್ದರು.