ಮೈಸೂರು: ಸಂವಿಧಾನ ಬದಲಾಯಿಸುತ್ತೇವೆ ಎನ್ನುವ ಬಿ.ಜೆ.ಪಿ. ಪಕ್ಷವನ್ನು ದಿಕ್ಕರಿಸಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವುದರೊಂದಿಗೆ ಸುನೀಲ್ ಬೋಸ್‌ರವರನ್ನು ಗೆಲ್ಲಿಸಬೇಕೆಂದು ವರುಣಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ಕರೆ ನೀಡಿದರು.
ವರುಣಾ ಕ್ಷೇತ್ರದ ರಂಗಸಮುದ್ರ ಕುಪ್ಯ, ತುಂಬಲ, ಕೆಂಪಯ್ಯನಹುಂಡಿ, ಬಿಳಿಗೆರೆಹುಂಡಿ ಗ್ರಾಮಗಳಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್‌ಬೋಸ್ ಪರವಾಗಿ ಮತಯಾಚಿಸಿ ಮಾತನಾಡಿದ ಅವರು. ಸಂವಿಧಾನ ಬದಲಾದರೆ ದೇಶಕ್ಕೆ ದೊಡ್ಡ ಅಪಾಯ ಎದುರಾಗಲಿದ್ದು ಜನರು ಈಗಲೇ ಎಚ್ಚರದಿಂದ ಮತ ಚಲಾಯಿಸಬೇಕು. ಬಡವರು, ರೈತರ ವಿರೋಧಿಯಾಗಿರುವ ಬಿಜೆಪಿ ಪಕ್ಷ ಶ್ರೀಮಂತರ ಪರವಾಗಿ ಕೆಲಸ ಮಾಡುತ್ತಿದೆ. ಬಿಜೆಪಿಯವರು ಯಾವತ್ತೂ ಸಹ ರೈತರ ಸಾಲ ಮನ್ನಾ ಮಾಡಿಲ್ಲ. ಕೇಂದ್ರದಲ್ಲಿ ಮನಮೋಹನ್‌ಸಿಂಗ್ ಪ್ರಧಾನಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಿದ್ದರು.
ರಾಜ್ಯದಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಸಹಕಾರ ಸಂಘದಲ್ಲಿರುವ ರೈತರ ಸಾಲ ೫೦ ಸಾವಿರದವರೆಗೆ ಮನ್ನಾ ಮಾಡಿದ್ದರು. ವಿವಿಧ ನಿಗಮ ಮಂಡಳಿಗಳಲ್ಲಿನ ದಲಿತರು, ಹಿಂದುಳಿದವರು, ಪರಿಶಿಷ್ಠ ಪಂಗಡದವರು, ಅಲ್ಪಸಂಖ್ಯಾತರ ಸಾಲ ಮನ್ನಾ ಮಾಡಿದ್ದರು. ಬಡವರ ಭಾಗ್ಯಜ್ಯೋತಿ ಬಿಲ್ಲನ್ನು ಮನ್ನಾ ಮಾಡಿದ್ದರು. ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಬಡ ಕುಟುಂಬದ ಮಹಿಳೆಗೆ ವರ್ಷಕ್ಕೆ ೧ ಲಕ್ಷ ರೂ. ಕೊಡಲಾಗುವುದು. ರೈತರ ಸಾಲ ಮನ್ನಾ ಮಾಡಲಾಗುವುದು ಎಂದ ಅವರು ಸುನೀಲ್‌ಬೋಸ್‌ರವರು ಡಾ.ಹೆಚ್.ಸಿ. ಮಹದೇವಪ್ಪರವರ ಪುತ್ರರಾಗಿದ್ದು ಹಲವು ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನಿಮ್ಮ ಪರವಾಗಿ ಒಳ್ಳೆಯ ಸಂಸದರಾಗಿ ಕೆಲಸ ಮಾಡುವ ನಂಬಿಕೆ ಇರುವುದರಿಂದ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಭಾಕರ್, ಮಹಾದೇವಣ್ಣ, ತುಂಬಲಬಾಬು, ಅನಿಲ್‌ಕುಮಾರ್, ಭಾಗ್ಯಮ್ಮ, ರಮೇಶ್, ಮುದ್ದೇಗೌಡ, ಮಹಾದೇವ, ರಘು, ಶಿವರಾಂ ಮತ್ತಿತರರು ಹಾಜರಿದ್ದರು.