ಬೆಂಗಳೂರು: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿನ ಮಹಾ ಕುಂಭಮೇಳಕ್ಕೆ ತೆರಳಿರುವಂತ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು, ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ವಿವಿಧ ಗಣ್ಯರು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿನ ಮಹಾ ಕುಂಭಮೇಳದಲ್ಲಿ ಭಾಗಿಯಾಗಿದ್ದರು. ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದರು.
ಇನ್ನೂ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕೂಡ ಇಂದು ಪ್ರಯಾಗ್ ರಾಜ್ ಮಹಾ ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಇಡೀ ವಿಶ್ವದ ಧರ್ಮಾತೀತ ಆಸ್ತಿಕರನ್ನು ಸೂಜಿಗಲ್ಲಿನಂತೆ ಬರಸೆಳೆದು ಜಾಗತಿಕ ಇತಿಹಾಸ ಬರೆಯುತ್ತಿರುವ 144 ವರ್ಷಗಳ ನಂತರ ನಡೆಯುತ್ತಿರುವ ಪ್ರಯಾಗ್ ರಾಜ್ ನ ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಮಿಂದದ್ದು ಪುನೀತ ಭಾವ ಮೂಡಿಸಿತು ಎಂದಿದ್ದಾರೆ.
ಜಾಗತಿಕ ಶಾಂತಿಗಾಗಿ, ದೇಶದ ಕಲ್ಯಾಣಕ್ಕಾಗಿ ಕರುನಾಡ ಜನರ ಒಳಿತಿಗಾಗಿ ಪ್ರಾರ್ಥಿಸಲಾಯಿತು. ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಈ ಕುಂಭಮೇಳ ಫೆಬ್ರವರಿ 28ರ ಕೊನೆಯ ದಿನದವರೆಗೂ ಹರಿದು ಬರುವ ಭಕ್ತ ಸಾಗರಕ್ಕೆ ಪುಣ್ಯ ಲಭಿಸಲಿ, ಯಾವುದೇ ಅವಘಡಗಳು ಸಂಭವಿಸದಿರಲೆಂದು ಭಗವಂತನಲ್ಲಿ ಪ್ರಾರ್ಥಿಸಲಾಯಿತು. ಪರಮಪೂಜ್ಯ ಋಷಿ ಮುನಿಗಳ ಆಶೀರ್ವಾದ ನವ ಚೈತನ್ಯ ಮೂಡಿಸಿತು ಎಂದು ಹೇಳಿದ್ದಾರೆ.