ಚಿಕ್ಕೋಡಿ: ಆದಷ್ಟು ಬೇಗನೆ ಬಿಜೆಪಿ ಪಕ್ಷಕ್ಕೆ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕ ನೇಮಕಾತಿ ಮಾಡಲಾಗುವುದು ಎಂದು ಶಿಕಾರಿಪುರದ ಶಾಸಕ ಬಿ ವೈ ವಿಜಯೇಂದ್ರ ಹೇಳಿದರು.ದಸರಾ ಹಬ್ಬದ ಪ್ರಯುಕ್ತ ಹುಕ್ಕೇರಿ ಹಿರೇಮಠದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಚಂದ್ರಶೇಖರ ಶಿವಾಚಾರ್ಯರ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದರು.ಯಡಿಯೂರಪ್ಪ ಹಿರಿಯರು ಇದ್ದಾರೆ. ಅವರು ಯಾವಾಗ ಬೇಕಾದರೂ ರಾಜ್ಯ ಪ್ರವಾಸ ಮಾಡಬಹುದು. ಅವರಿಗೆ ನೀವು ಪ್ರವಾಸ ಮಾಡಬೇಡಿ ಎಂದು ಯಾರೂ ಹೇಳಿಲ್ಲ. ಯಡಿಯೂರಪ್ಪ ಎಲ್ಲಿ ಬೇಕಾದಲ್ಲಿ ಪ್ರವಾಸ ಮಾಡ್ತಾರೆ. ಯಾರೂ ಕೂಡ ಅದನ್ನ ತಡೆಯುವ ಪ್ರಯತ್ನ ಮಾಡೋದಿಲ್ಲ, ಮಾಡುವ ಅವಶ್ಯಕತೆಯೂ ಇಲ್ಲ ಎಂದು ಹೇಳಿದರು.
ಬರಪೀಡಿತ ತಾಲೂಕು ಘೋಷಣೆ ಮಾಡಲು ಸರ್ಕಾರ ಮೀನಮೇಷ ಎಣಿಸುತ್ತಿದೆ. ಸರ್ಕಾರ ಬಂದು ಇಷ್ಟು ದಿನ ಆದರೂ ಅಭಿವೃದ್ಧಿಗೆ ಒಂದು ರೂ. ಅನುದಾನ ಯಾವುದೇ ಶಾಸಕರಿಗೆ ಕೊಟ್ಟಿಲ್ಲ. ಎಲ್ಲಾ ಕ್ಷೇತ್ರಗಳಲ್ಲಿಯೂ ಸರ್ಕಾರ ವಿಫಲವಾಗಿದೆ ಸಹಜವಾಗಿ ಆಡಳಿತ ಪಕ್ಷದ ಶಾಸಕರ ಅಸಮಾಧಾನ ಎದ್ದು ಕಾಣುತ್ತಿದೆ ಎಂದು ಹೇಳಿದರು.