ಮಂಡ್ಯ: ಫೆ.09 ರಂದು ನಡೆಯುವ ಮಂಡ್ಯ ಬಂದ್ ಗೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ಹೇಳಿದರು.
ಮಂಡ್ಯದಲ್ಲಿ ಮಾತನಾಡಿದ ಅವರು, ಬರಿ ಕೆರಗೋಡು ಗ್ರಾಮವಲ್ಲ, ಕೆರಗೋಡು-ಮಂಡ್ಯ ಮಾತ್ರವಲ್ಲ ರಾಜ್ಯಾದ್ಯಂತ ಲಕ್ಷಾಂತರ ಹನುಮ ಬಾವುಟ ಹಾಕ್ತೇವೆ. ಇಡೀ ಮಂಡ್ಯ ಜಿಲ್ಲೆಯಲ್ಲಿ ಅಭಿಯಾನ. ರಾಜ್ಯಾದ್ಯಂತ ಹನುಮ ಧ್ವಜ ಹಾಕ್ತೇವೆ ಎಂದರು.
ಕಾಂಗ್ರೆಸ್ ಬರಿ ಒಂದು ಧ್ವಜ ಇಳಿಸಲು ಸಾಧ್ಯವಾಗಿದೆ. ಲಕ್ಷಾಂತರ ಧ್ವಜ ಮನೆಮನೆಗಳ ಮೇಲೆ ಹಾರಾಡುತ್ತಿದೆ. ಮುಂದಿನ ದಿನಗಳಲ್ಲಿ ಇದು ದೊಡ್ಡ ಆಂದೋಲನವಾಗುತ್ತದೆ ಎಂದು ತಿಳಿಸಿದರು.
ಫೆ.9 ರಂದು ಮಂಡ್ಯ ಬಂದ್ ನಲ್ಲಿ ಭಾಗಿಯಾಗುತ್ತೇವೆ. ಭಜರಂಗದಳದ ಕಾರ್ಯಕರ್ತರಿಗೆ ಬೆಂಬಲ ಕೊಡ್ತೇವೆ. ಶಾಸಕರಿಗೆ ಕೈ ಮುಗಿದು ಮನವಿ ಮಾಡ್ತೇವೆ. ಧ್ವಜ ಇಳಿಸಿದ ಜಾಗದಲ್ಲಿ ಹನುಮ ಧ್ವಜ ಹಾರಿಸಿ. ನೀವು ಹೇಳಿದ ಮಾತನ್ನು ನಾವು ಕೇಳ್ತೇವೆ. ನೀವು ಹಿಂದುಗಳ ಭಾವನೆಗೆ ಧಕ್ಕೆ ತಂದಿದ್ದಿರಿ. ಗಣಿಗ ರವಿ ಅವರಿಗೆ ಕೈಮುಗಿದು ಕೇಳ್ತೇನೆ ಎಂದರು.
108 ಅಡಿ ಧ್ವಜದ ಕಂಬದಲ್ಲಿರುವ ರಾಷ್ಟ್ರ ಧ್ವಜಕ್ಕೆ ಗೌರವ ಕೊಟ್ಟು ಅರ್ಧ ಕಂಬಕ್ಕೆ ಮಾತ್ರ ಹಾರಿಸಿದ್ದಿರಿ ಅದಕ್ಕೆ ಅಪಮಾನ ಮಾಡಬೇಡಿ. ಅದೇ ಧ್ವಜ ಕಂಬದಲ್ಲಿ ಹನುಮ ಧ್ವಜ ಹಾರಿಸಿ ನಾವು ಬಂದ್ ವಾಪಸ್ ಪಡೆಯುತ್ತೇವೆ. ಯಾವುದೇ ಚುನಾವಣೆ ದೃಷ್ಟಿ ಇಲ್ಲ, ನಾವು ಸಿದ್ದರಾಮಯ್ಯ, ಚಲುವರಾಯಸ್ವಾಮಿ, ಗಣಿಗ ರವಿ ಅವರಿಗೆ ಧ್ವಜ ಇಳಿಸಿ ಅಂತ ಹೇಳಿಲ್ಲ. ವಿಜಯೇಂದ್ರ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಆರ್.ಅಶೋಕ್ ಹೇಳಿದ್ರಾ? ನೀವಾಗಿ ನೀವು ಹೋಗಿ ಹನುಮ ಧ್ವಜ ಇಳಿಸಿ ಈಗ ರಾಜಕೀಯ ದುರುದ್ದೇಶ ಅಂತ ಸುಳ್ಳು ಹೇಳ್ತಿದ್ದಿರಿ. ಯಾವುದೇ ಕಾರಣಕ್ಕೂ ಇದರಲ್ಲಿ ರಾಜಕೀಯ ಉದ್ದೇಶ ಇಲ್ಲ. ಭಕ್ತಿ, ಭಾವನೆ, ಹಿಂದೂ ಸಂಸ್ಕೃತಿ, ಹಿಂದೂ ಸಂಸ್ಕಾರ ಅಷ್ಟೆ ಎಂದು ಹೇಳಿದರು.