ಗುಂಡ್ಲುಪೇಟೆ: ಬಿಜೆಪಿ ಪಕ್ಷ ಲಿಂಗಾಯತ ಸಮುದಾಯ ಮತ್ತು ಬಿ.ಎಸ್.ಯಡಿಯೂರಪ್ಪ ಕುಟುಂಬ ಹಾಗೂ ಬೆಂಬಲಿಗರನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ ಎಂದು ವೀರಶೈವ-ಲಿಂಗಾಯತ ಮಹಾ ಸಭಾದ ಜಿಲ್ಲಾಧ್ಯಕ್ಷ ಮನುಶ್ಯಾನುಬೋಗ್ ಗುಡುಗಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷದ ರಾಜ್ಯ ಘಟಕವು ಕಳೆದ ಐದು ವರ್ಷಗಳಿಂದ ವೀರಶೈವ ಲಿಂಗಾಯಿತ ಸಮುದಾಯದ ಬೆಳವಣಿಗೆಗೆ ಅಡ್ಡಿಪಡಿಸುತ್ತಾ ಸಮುದಾಯದ ನಾಯಕರನ್ನು ತುಳಿಯುತ್ತ ನಿರ್ಲಕ್ಷಿಸುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಎಚ್ಚರಿಕೆ ನೀಡಿದರು.
ಕಳೆದ ಕಳೆದ 2004ರ ವಿಧಾನಸಭಾ ಚುನಾವಣೆಯ ನಂತರ 2018ರ ವಿಧಾನಸಭಾ ಚುನಾವಣೆಯವರೆಗೂ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂಬ ಸದುದ್ದೇಶದಿಂದ ವೀರಶೈವ ಲಿಂಗಾಯತ ಸಮುದಾಯ ಬಿಜೆಪಿ ಜೊತೆ ಧೃಡವಾಗಿ ನಿಂತಿದೆ.
ಸಮುದಾಯದ ಹಲವು ನಾಯಕರು ಪಕ್ಷಕ್ಕೆ ಪೂರಕವಾಗಿ ಕೆಲಸ ಮಾಡಿದ ಪರಿಣಾಮ ಪಕ್ಷ ಸದೃಢವಾಗಿತ್ತು. ಆದರೆ 2011ರಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಅವಧಿ ಪೂರ್ಣಗೊಳಿಸಲು ಬಿಡದೆ ಒತ್ತಾಯ ಪೂರ್ವಕವಾಗಿ ರಾಜೀನಾಮೆ ಕೊಡಿಸಲಾಯಿತು. ಆನಂತರ ಹಂತ ಹಂತವಾಗಿ ಬಿ.ಎಸ್.ವೈ ಬೆಂಬಲಿಗರನ್ನು ಪಕ್ಷದ ಕಚೇರಿ, ನಾನು ಹುದ್ದೆಗಳಿಂದ ಹೊರಗಿಡಲಾಯಿತು. ಅಲ್ಲದೆ ಬಿ.ಎಸ್.ವೈ ರಜ್ಯ ಪ್ರವಾಸಕ್ಕೆ ತಡೆ ಒಡ್ಡಲಾಯಿತು. ಅಲ್ಲದೆ ಬಿ.ಎಸ್.ವೈ ಪುತ್ರ ಬಿ.ವೈ.ವಿಜಯೇಂದ್ರ ಉಪ ಚುನಾವಣೆ ಹಾಗೂ ಪಕ್ಷದ ರಾಜ್ಯ ಪ್ರವಾಸದಲ್ಲಿ ಪ್ರಮುಖ ಪಾತ್ರ ವಹಿಸದಂತೆ ನೋಡಿಕೊಳ್ಳಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿ.ಎಸ್.ಯಡಿಯೂರಪ್ಪ ಪರ ಧ್ವನಿ ಎತ್ತಿದ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಇದು ನೇರವಾಗಿ ಲಿಂಗಾಯಿತ ಸಮುದಾಯ ಮತ್ತು ಬಿ.ಎಸ್.ವೈ ಕುಟುಂಬ ಹಾಗೂ ಬೆಂಬಲಿಗರನ್ನು ಗುರಿ ಮಾಡಿ ರಾಜಕೀಯವಾಗಿ ಹತ್ತಿದ ಪ್ರಯತ್ನವಾಗಿದೆ.
ಅಲ್ಲದೆ ಲಿಂಗಾಯಿತ ಸಮುದಾಯದ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನೀಡದೆ ಕಾಂಗ್ರೆಸ್ ಸೇರುವಂತೆ ಮಾಡಲಾಯಿತು. ಲಕ್ಷಣ ಸವದಿಯಂತಹ ಉತ್ತರ ಕರ್ನಾಟಕದ ಹಿರಿಯ ಲಿಂಗಾಯತ ನಾಯಕನನ್ನು ಟಿಕೆಟ್ ತಪ್ಪಿಸಿ ಹೀನಾಯವಾಗಿ ಕಾಣಲಾಯಿತು. ಯಾವುದೋ ಕಾಣದ ವ್ಯಕ್ತಿಯ ಪ್ರಭಾವದಿಂದ ಮೈಸೂರಿನಲ್ಲಿ ತಾವೇ ನೇರವಾಗಿ ಜೆ.ಡಿ.ಎಸ್ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ಸಂಸದ ಪ್ರತಾಪ್ ಸಿಂಹ ಬಿ.ಎಸ್.ಯಡಿಯೂರಪ್ಪ ಅವರನ್ನೇ ಗುರಿ ಮಾಡಿ ಹೊಂದಾಣಿಕೆ ರಾಜಕಾರಣ ಬಗ್ಗೆ ಹೇಳಿಕೆ ನೀಡಿದರೂ ಯಾವುದೇ ಕಾರಣ ಕೇಳಲಿಲ್ಲ. ಅಲ್ಲದೆ ಈ ಬಾರಿಯ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸ್ಥಾನದ ಆಯ್ಕೆ ಬಿ.ಎಸ್.ವೈ ಅಭಿಪ್ರಾಯವಿಲ್ಲದೆ ನಡೆಯುತ್ತಿದೆ ಎಂಬ ಭಾವನೆ ಸಮುದಾಯದಲ್ಲಿ ಮೂಡಿದೆ ಎಂದು ತಿಳಿಸಿದರು.
ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತುಗಳು ನೇರವಾಗಿ ಬಿ.ಎಸ್.ವೈ ಕುಟುಂಬದವರನ್ನೇ ಗುರಿಯಾಗಿಸಿದೆ. ಆದರೆ ಹೈ ಕಮಾಂಡ್ ಇದನ್ನು ಪ್ರಶ್ನಿಸುವ ಧೈರ್ಯ ಮಾಡುತ್ತಿಲ್ಲ. ಆದ್ದರಿಂದ ಮುಂದಿನ ಪಕ್ಷದ ರಾಜ್ಯಾಧ್ಯಕ್ಷರ, ವಿರೋಧ ಪಕ್ಷದ ನಾಯಕರ ಆಯ್ಕೆ ಪ್ರಕ್ರಿಯೆಯಲ್ಲಿ ಬಿ.ಎಸ್.ವೈ ಅವರನ್ನು ನಿರ್ಲಕ್ಷಿಸುತ್ತಿಲ್ಲ ಎಂದು ಬಿ.ಜೆ.ಪಿ ಪಕ್ಷವು ಸಮುದಾಯಕ್ಕೆ ಮನವರಿಕೆ ಮಾಡಿಕೊಡಬೇಕು. ಪುತ್ರ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಆಯ್ಕೆ ಮಾಡಬೇಕು. ಜೊತೆಗೆ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಂದಿನ ರಾಷ್ಟ್ರಪತಿ ಆಯ್ಕೆಗೆ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ವೀರಶೈವ-ಲಿಂಗಾಯತ ಮಹಾ ಸಭಾದ ಯುವ ಘಟಕದ ಕಾರ್ಯದರ್ಶಿ ಪ್ರಸಾದ್, ಚೌಡಹಳ್ಳಿ ನಂದೀಶ್, ಜಿಲ್ಲಾ ಕಾರ್ಯಕಾರಿ ಸಮಿತಿ ನಿರ್ದೇಶಕ ಇಂಗಲವಾಡಿ ಅಭಿಷೇಕ್, ಎಚ್.ಸಿ.ಸ್ವಾಮಿ ಹಾಜರಿದ್ದರು.