ಬೆಂಗಳೂರು: ದೇಶದಲ್ಲಿ ಬಿಜೆಪಿಯ ಅವನತಿ ಕರ್ನಾಟಕದಿಂದ ಶುರುವಾಗಿದೆ. ಪ್ರಧಾನಿ ಮೋದಿ ಪ್ರಭಾವ ಮಂಕಾಗಿದೆ. ಮೋದಿಯವರು ರಾಜ್ಯದಲ್ಲಿ ಪ್ರಚಾರ ಮಾಡಿದ ಎಲ್ಲಾ ಕಡೆ ಬಿಜೆಪಿ ಹೀನಾಯವಾಗಿ ಸೋತಿರುವುದು ಇದಕ್ಕೆ ಸಾಕ್ಷಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ವಿಧಾನ ಪರಿಷತ್ ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 28 ಬಾರಿ ಬಂದರು. ಹಿಂದಿನ ಯಾವ ಪ್ರಧಾನಿಗಳೂ ರಾಜ್ಯಗಳ ಚುನಾವಣೆ ವೇಳೆ ಹೀಗೆ ವರ್ತಿಸಿರಲಿಲ್ಲ. ಉಳಿದ ಪ್ರಧಾನಿಗಳಿಗೆ ದೇಶವನ್ನು ಮುನ್ನಡೆಸುವುದು ಪ್ರಥಮ ಆದ್ಯತೆ ಆಗಿರುತ್ತಿತ್ತು. ಬರೀ ಚುನಾವಣೆಗಳನ್ನು ಮಾಡುತ್ತಾ ಓಡಾಡುತ್ತಿರಲಿಲ್ಲ ಎಂದರು.
ವಿಧಾನಸಭೆ ಚುನಾವಣೆಯಲ್ಲಿ ಮೋದಿ ಅವರು ರೋಡ್ ಶೋ ನಡೆಸಿದ, ಪ್ರಚಾರ ನಡೆಸಿದ ಕ್ಷೇತ್ರಗಳಲ್ಲಿ ಮತ್ತು ಸುತ್ತ ಮುತ್ಯಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅತ್ಯಂತ ಬಹುಮತದಿಂದ ಗೆದ್ದಿದೆ. ಹೀಗಾಗಿ ಮೋದಿ ಅವರ ಪ್ರಭಾವ ಮಂಕಾಗುತ್ತಿರುವುದನ್ನು ನೀವು ಒಪ್ಪಿಕೊಳ್ಳಿ. ಇನ್ಮೇಲೆ ಮೋದಿ ಅವರ ಮೇಲೆ ಅವಲಂಬಿತರಾಗಬೇಡಿ ಎಂದು ಬಿಜೆಪಿ ಸದಸ್ಯರಿಗೆ ತಿಳಿಸಿದರು.
ಹಿಟ್ಲರ್ ಗೆ ಬೈದರೆ ನಿಮಗೇಕೆ ಸಿಟ್ಟು?
ಹಿಟ್ಲರ್ ತನ್ನ ತಿಕ್ಕಲುತನದಿಂದ ಹೇಗೆ ಮನುಷ್ಯರ ಮಾರಣ ಹೋಮಕ್ಕೆ ಕಾರಣನಾದ ಎಂದು ವಿವರಿಸುತ್ತಿದ್ದಾಗ ಬಿಜೆಪಿ ಸದಸ್ಯರು ಮುಖ್ಯಮಂತ್ರಿಗಳ ಮಾತಿಗೆ ಅಡ್ಡಿಪಡಿಸಿದರು. ಈ ವೇಳೆ ಮುಖ್ಯಮಂತ್ರಿಗಳು, ‘ಹಿಟ್ಲರ್ ಗೆ ಬೈದರೆ ನಿಮಗೇಕೆ ಸಿಟ್ಟು ?” ಎಂದು ಪ್ರಶ್ನಿಸಿದರು.
ಜನರ ಜೇಬಿನಲ್ಲಿರುವುದನ್ನು ಕಿತ್ತುಕೊಂಡಿರಿ
ಕಾಂಗ್ರೆಸ್ ಗೆಲುವಿಗೆ ಕಾರಣವಾದ ಸಂಗತಿಗಳನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು “ಕಾಂಗ್ರೆಸ್ ಜನರ ಜೇಬಿನಲ್ಲಿ ಹಣ ಇರಬೇಕು ಎನ್ನುವ ಉದ್ದೇಶದಿಂದ ಐದು ಗ್ಯಾರಂಟಿಗಳನ್ಮು ಘೋಷಿಸಿ ಜಾರಿ ಮಾಡಿತು. ಬಡವರು-ಮಧ್ಯಮ ವರ್ಗದವರ ಜೇಬಿನಲ್ಲಿ ಹಣ ಇದ್ದರೆ ನಾಡಿನ ಆರ್ಥಿಕತೆ ಬೆಳೆಯುತ್ತದೆ ಎನ್ನುವುದು ಕಾಂಗ್ರೆಸ್ ನ ಬದ್ಧತೆ ಮತ್ತು ಸಿದ್ಧಾಂತ. ಆದರೆ ಬಿಜೆಪಿ ಜನರ ಜೇಬಿನಲ್ಲಿರುವ ಹಣ ಕಿತ್ತುಕೊಳ್ಳುವ ಮನಸ್ಥಿತಿ ಹೊಂದಿರುವ ಕಾರಣದಿಂದ ಹೀನಾಯವಾಗಿ ಸೋಲು ಕಾಣಬೇಕಾಯಿತು ಎಂದರು.