ಬೆಂಗಳೂರು: ಗೆಳತಿಗೆ ಆಕೆಯ ಖಾಸಗಿ ವೀಡಿಯೋ ತೋರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತ ಬರೋಬ್ಬರಿ 2.57 ಕೋಟಿ ರೂ. ಸುಲಿಗೆ ಮಾಡಿದ್ದ ಆರೋಪಿಯನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮೋಹನ್ ಕುಮಾರ್ ಎಂಬಾತ ಆರೋಪಿ. ಆತ ಚಾಮರಾಜಪೇಟೆಯ 19 ವರ್ಷದ ಯುವತಿಗೆ ಬ್ಲ್ಯಾಕ್‌ಮೇಲ್ ಮಾಡಿ 2019ರಿಂದ 2.57 ಕೋಟಿ ರೂ. ಸುಲಿಗೆ ಮಾಡಿದ್ದಾನೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ದೇವನಹಳ್ಳಿಯ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಬಾಲಕಿಗೆ ಆರೋಪಿಯ ಪರಿಚಯವಾಗಿ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಮೋಹನ್ ಆಕೆಯನ್ನು ಪುಸಲಾಯಿಸಿ ಪ್ರವಾಸಿ ತಾಣಗಳಿಗೆ ಕರೆದೊಯ್ದ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ. ಈ ವೇಳೆ ಯುವತಿಯ ಖಾಸಗಿ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದ. ಬಳಿಕ ಈ ವೀಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ 2.57 ಕೋಟಿ ರೂ. ಸುಲಿಗೆ ಮಾಡಿದ್ದಾನೆ. ಅಲ್ಲದೆ ಆಕೆಯಿಂದ ಚಿನ್ನಾಭರಣ, ದುಬಾರಿ ಮೌಲ್ಯದ ವಾಚ್, ಬೈಕ್‌ಗಳನ್ನು ಪಡೆದುಕೊಂಡಿದ್ದಾನೆ. ಆದರೆ ಆರೋಪಿಯ ಕಿರುಕುಳ ಹೆಚ್ಚಾದರಿಂದ ಬೇಸತ್ತ ಯುವತಿ, ಪೊಲೀಸರಿಗೆ ದೂರು ನೀಡಿದ್ದಳು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದರು.