ಮೈಸೂರು : ದೇಶದ ಪ್ರಖ್ಯಾತ ರಾಜಕಾರಣಿಗಳ ಅರೆನಗ್ನ ಚಿತ್ರಗಳ ಮೇಲೆ ಒಂದು ಧರ್ಮದ ಶ್ಲೋಕಗಳನ್ನು ಮತ್ತು ಪ್ರವಾದಿಗಳ ಹೆಸರನ್ನು ಹಾಕಿ ಧರ್ಮನಿಂದನೆ ಮಾಡಿರುವ ಪೋಸ್ಟ್ ಅನ್ನು ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಾಕಿಕೊಂಡ ಕಾರಣಕ್ಕೆ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸತೀಶ್ ಅಲಿಯಾಸ್ ಪಾಂಡುರಂಗ ಎಂಬಾತನನ್ನು ಮೈಸೂರಿನ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಒಂದು ದಿನದ ಮಟ್ಟಿಗೆ ಪೊಲೀಸ್ ಕಸ್ಟಡಿಗೆ ನೀಡಿದೆ.
ಪೊಲೀಸರು ಆರೋಪಿ ಸತೀಶ್ ಅನ್ನು ಮೈಸೂರಿನ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು.
ಸರ್ಕಾರಿ ಅಭಿಯೋಜಕಿ ಸವಿತಾ ಅವರು ವಾದ ಮಂಡನೆ ಮಾಡಿದರು. ಆರೋಪಿಯನ್ನ ಐದು ದಿನಗಳ ಪೊಲೀಸ್ ಕಸ್ಟಡಿಗೆ ನೀಡುವಂತೆ ಎಪಿಪಿ ಮನವಿ ಮಾಡಿದರು.
ಆದರೆ ಇದಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ ಸತೀಶ್ ಪರ ವಕೀಲ ಅ.ಮ.ಭಾಸ್ಕರ್, ಕೇವಲ ಮೂರು ಗಂಟೆ ಪೊಲೀಸ್ ಕಸ್ಟಡಿಗೆ ನೀಡುವಂತೆ ವಾದಿಸಿದರು. ಒಂದು ದಿನದ ಒಳಗೆ ಮಹಜರು ಕಾರ್ಯ ಮುಗಿಸಿ. ಕೃತ್ಯಕ್ಕೆ ಬಳಕೆಯಾದ ಮೊಬೈಲ್ ಸೀಜ್ ಮಾಡಿ ಎಂದು ಕೇವಲ ಒಂದು ದಿನ ಮಾತ್ರ ಆರೋಪಿ ಸತೀಶ್‌ನನ್ನು ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಧೀಶರಾದ ಸರೋಜ ಅವರು ಆದೇಶ ಹೊರಡಿಸಿದರು.