ಚನ್ನಪಟ್ಟಣ: ನಮ್ಮ ಹಿರಿಯರು ದಾನಗಳಲ್ಲಿ ವಿದ್ಯಾದಾನ ಶ್ರೇಷ್ಠ ಎನ್ನುತ್ತಿದ್ದರು. ಆದರೆ ರಕ್ತದಾನ ಅದಕ್ಕಿಂದ ಶ್ರೇಷ್ಠದಾನವಾಗಿದೆ ಎಂದು ನಿವೃತ್ತ ಪ್ರಾಂಶುಪಾಲರು ಹಾಗೂ ಚನ್ನಪಟ್ಟಣ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ನಿಂಗೇಗೌಡರು(ಎನ್‌ಜಿ) ಅಭಿಪ್ರಾಯಿಸಿದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಮತ್ತು ರೇಷ್ಮೆಸೀಮೆ ಪತ್ರಿಕೆ ಹಾಗೂ ಚಂದ್ರು ಡಯಾಗ್ನೋಸ್ಟಿಕ್ ಸೆಂಟರ್ ಹಾಗೂ ಜೀವಾಮೃತ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ವಿಶ್ವ ರಕ್ತದಾನ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿವರನ್ನು ಅಭಿನಂದಿಸಿ ಮಾತನಾಡಿದ ಅವರು ನಮ್ಮ ಪೂರ್ವಜನರು ವಿದ್ಯಾದಾನವೇ ಮಹಾದಾನ ವಿದ್ಯ ಕಲಿಸಿದರೆ ಆಸ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಂಡು ಬದುಕು ಕಟ್ಟಿಕೊಳ್ಳುತ್ತಾನೆ ಎನ್ನುತ್ತಿದ್ದರು, ರಕ್ತದಾನ ಎಲ್ಲಾ ದಾನಗಳಿಗೂ ಶ್ರೇಷ್ಠದಾನವಾಗಿದ್ದು ಒಬ್ಬ ಮನುಷ್ಯನ ರಕ್ತ ನಾಲ್ಕು ಮಂದಿಗೆ ಜೀವದಾನ ಮಾಡುತ್ತದೆ. ರಕ್ತದಾನದಲ್ಲಿ ಯಾವುದೇ ಜಾತಿ, ಧರ್ಮದ ಭೇದವಿಲ್ಲ, ಈ ನಿಟ್ಟಿನಲ್ಲಿ ರಕ್ತದಾನ ಮಾಡುತ್ತಿರುವ ಎಲ್ಲರಿಗೂ ಒಳ್ಳೆಯದಾಗಲಿ ಎಂದರು.
ಕಕಜ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡರು ಮಾತನಾಡಿ, ಗಾಳಿ, ನೀರು, ಬೆಳಕು ಸೇರಿದಂತೆ ಪಂಚಭೂತಗಳಲ್ಲಿ ಹೇಗೆ ಜಾತಿ, ಧರ್ಮ, ಕುಲ, ಲಿಂಗಬೇದವಿಲ್ಲವೋ ಅದೇ ರೀತಿ ರಕ್ತದಾನಕ್ಕೂ ಯಾವುದೇ ಬೇದ ಇಲ್ಲ. ಹೆರಿಗೆ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಯರಿಗೆ ಹಾಗೂ ತುರ್ತು ಶಸ್ತ್ರ ಚಿಕಿತ್ಸೆಯ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಹೆಚ್ಚಿರುತ್ತದೆ. ಇಂತಹ ಸಂದರ್ಭದಲ್ಲಿ ನಮ್ಮ ಕುಟುಂಬದವರಲ್ಲೇ ನಮಗೆ ರಕ್ತ ಸಿಗುವುದಿಲ್ಲ. ಈ ಸಂದರ್ಭದಲ್ಲಿ ನಮಗೆ ಯಾರು ರಕ್ತ ಕೊಡುತ್ತಾರೆ ಎಂಬುದೇ ನಮಗೆ ತಿಳಿಯುವುದಿಲ್ಲ. ಈ ನಿಟ್ಟಿನಲ್ಲಿ ಯಾವುದೇ ಸ್ವಾರ್ಥ ಇಲ್ಲದೆ ಒಬ್ಬರ ಪ್ರಾಣ ಕಾಪಾಡುವ ನಿಟ್ಟಿನಲ್ಲಿ ರಕ್ತದಾನ ಮಾಡುವವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಅಗತ್ಯ ಸಂದರ್ಭದಲ್ಲಿ ರಕ್ತ ಸಿಗದೆ ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ಇದೆ ಎಂಬ ಕಾರಣದಿಂದ ದಿನದ ೨೪ ಗಂಟೆ ರಕ್ತ ಸಿಗುವಂತಾಗಬೇಕು ಎಂಬ ನಿಟ್ಟಿನಲ್ಲಿ ಚಂದ್ರ ಡಯಾಗ್ನೋಸ್ಟಿಕ್‌ನ ಮಾಲೀಕರಾದ ವಂದಾರಗುಪ್ಪೆ ಚಂದ್ರೇಗೌಡರು ಪಟ್ಟಣದಲ್ಲಿ ಬ್ಲಡ್ ಬ್ಯಾಂಕ್ ನಿರ್ಮಾಣ ಮಾಡಲು ಹತ್ತಾರು ವರ್ಷಗಳಿಂದ ಪ್ರಯತ್ನಿಸಿದರು, ಇದಕ್ಕಾಗಿ ಪಟೇಲರ ಸಂಘದ ಜಾಗ, ಸರ್ಕಾರಿ ಆಸ್ಪತ್ರೆಯಲ್ಲಿ ಸಹ ಪ್ರಯತ್ನಿಸಿದರು. ಆದರೆ ಜಾಗದ ಸಮಸ್ಯೆ ತೀರಲೇ ಇಲ್ಲ. ಈ ನಿಟ್ಟಿನಲ್ಲಿ ಸ್ವಂತ ಆಸ್ತಿಯನ್ನು ಅಡಮಾನ ಇಟ್ಟು ಸಾಲ ಪಡೆದು ಜೀವಾಮೃತ ರಕ್ತ ನಿಧಿ ಸೆಂಟರ್ ತೆರೆದಿದ್ದು ಇಂದು ಅವರಲ್ಲಿ ಎಲ್ಲಾ ಗುಂಪಿನ ರಕ್ತ ಅಗತ್ಯ ಸಂದರ್ಭದಲ್ಲಿ ದೊರೆಯುತ್ತಿದೆ, ಆರಂಭದಲ್ಲಿ ಸೆಂಟರ್‌ನ ವಿದ್ಯುತ್ ಬಿಲ್ ಕಟ್ಟಲೂ ಹಣ ಇಲ್ಲದೆ ಸಂಕಷ್ಟ ಎದುರಿಸಿದ್ದ ಸಂದರ್ಭ ಇದೆ. ಜೊತೆಗೆ ರಕ್ತವನ್ನು ಮಾರಿಕೊಳ್ಳುತ್ತಾರೆ ಎಂಬ ಆರೋಪಗಳನ್ನು ಸಹ ಎದುರಿಸಿದ್ದಾರೆ. ಆದರೂ ಇದಕ್ಕೆ ತಲೆ ಕೆಡಿಸಿಕೊಳ್ಳದೆ ರಕ್ತ ಸಂಗ್ರಹ ಮಾಡಿ ಅಗತ್ಯ ಸಂದರ್ಭದಲ್ಲಿ ರಕ್ತದ ಕೊರತೆ ನೀಗಿಸುವಲ್ಲಿ ಸೇವೆ ಮಾಡುತ್ತಿದ್ದಾರೆ ಎಂದು ರಮೇಶ್‌ಗೌಡರು ಚಂದ್ರೇಗೌಡರ ಸೇವೆಯನ್ನು ಶ್ಲಾಘನೆ ಮಾಡಿದರು.
ಜೀವಾಮೃತ ರಕ್ತನಿಧಿ ಕೇಂದ್ರದ ಮಾಲೀಕ ಚಂದ್ರೇಗೌಡ ಮಾತನಾಡಿ, ಕೊರೋನಾ ಬಳಿಕ ರಕ್ತದ ಕೊರತೆ ಹೆಚ್ಚಾಗಿದೆ. ಜೊತೆಗೆ ಬಿಸಿಲಿನ ತಾಪದ ಕಾರಣ ರಕ್ತದಾನ ಮಾಡಲು ಜನರು ಹಿಂಜರಿಯುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ರಕ್ತದ ಕೊರತೆ ಹೆಚ್ಚಾಗಿದ್ದು, ಸಂಘ-ಸಂಸ್ಥೆಗಳು ಹೆಚ್ಚು ಹೆಚ್ಚು ರಕ್ತದಾನ ಶಿಬಿರಗಳನ್ನು ಆಯೋಜಿಸಿ ರಕ್ತದಾನದ ಬಗ್ಗೆ ಅರಿವು ಮೂಡಿಸಬೇಕಿದೆ ಎಂದರು.
