ಬೆಂಗಳೂರು: ನಗರದಲ್ಲಿ ಇಂದು ಬೆಳ್ಳಂಬೆಳಿಗ್ಗೆ ಭೀಕರ ಅಪಘಾತ ಸಂಭವಿಸಿದೆ. ವಿಜಯನಗರ ಸಂಚಾರ ಠಾಣಾ ವ್ಯಾಪ್ತಿಯ ಗೋವಿಂದರಾಜ ನಗರದ ಬಳಿ ಬಿಎಂಟಿಸಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಸ್ಕೂಟರ್ ಸವಾರ ಕುಮಾರ್ (೪೫) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅನ್ನಪೂರ್ಣೇಶ್ವರಿ ನಗರ ನಿವಾಸಿಯಾಗಿದ್ದ ಕುಮಾರ್, ಇಂದು ಪತ್ನಿಯ ಸೀಮಂತ ಕಾರ್ಯವಿದ್ದ ಕಾರಣ ವಿಜಯನಗರ ಮಾರ್ಕೆಟ್‌ನಿಂದ ಹೂವು, ಹಣ್ಣು ಖರೀದಿಸಿಕೊಂಡು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಗೋವಿಂದರಾಜ ನಗರದ ಬೈ ಟು ಕಾಫಿ ಬಳಿ ಬಿಎಂಟಿಸಿ ಬಸ್ ಡಿಕ್ಕಿಯಾಗಿದೆ. ನೆಲಕ್ಕೆ ಬಿದ್ದ ಕುಮಾರ್‌ಗೆ ತಲೆಗೆ ಪೆಟ್ಟಾಗಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ವಿಜಯನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.