ಅಬುಜಾ : ಆಹಾರ ಮಾರುಕಟ್ಟೆಗೆ ಜನರನ್ನು ಕರೆದೊಯ್ಯುತ್ತಿದ್ದ ದೋಣಿ ಉತ್ತರ ನೈಜೀರಿಯಾದ ನಿಗರ್ ನದಿಯಲ್ಲಿ ಮುಳುಗಿ ಸಂಭವಿಸಿದ ದುರಂತದಲ್ಲಿ ಕನಿಷ್ಠ 27 ಜನ ಜಲಸಮಾಧಿಯಾಗಿದ್ದಾರೆ. ಬಹುತೇಕ ಮಹಿಳೆಯರು ಸೇರಿ, ದೋಣಿಯಲ್ಲಿ ಪ್ರಯಾಣಿಸುತ್ತಿದ್ದ 100ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.
ಕೋರಿ ರಾಜ್ಯದಿಂದ ಪಕ್ಕದ ನಿಗರ್ ರಾಜ್ಯಕ್ಕೆ ತೆರಳುತ್ತಿದ್ದ ದೋಣಿಯಲ್ಲಿ ಕನಿಷ್ಠ 200 ಮಂದಿ ಪ್ರಯಾಣಿಕರಿದ್ದರು ಎಂದು ನಿಗರ್ ರಾಜ್ಯದ ತುರ್ತು ನಿರ್ವಹಣಾ ಏಜೆನ್ಸಿ ವಕ್ತಾರ ಇಬ್ರಾಹಿಂ ಔದು ಹೇಳಿದ್ದಾರೆ.
ಮುಳುಗು ತಜ್ಞರು 27 ಮೃತದೇಹಗಳನ್ನು ಶುಕ್ರವಾರ ಸಂಜೆ ನದಿಯಿಂದ ಹೊರತೆಗೆದಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಕೋರಿ ರಾಜ್ಯ ತುರ್ತು ಸೇವೆಗಳ ವಕ್ತಾರ ಸಾಂಡ್ರಾ ಮೂಸಾ ಸ್ಪಷ್ಟಪಡಿಸಿದ್ದಾರೆ. ಘಟನೆ ನಡೆದ 12 ಗಂಟೆ ಬಳಿಕವೂ ಯಾರೂ ಬದುಕಿ ಉಳಿದಿರುವುದು ಪತ್ತೆಯಾಗಿಲ್ಲ ಎಂದು ಅವರು ವಿವರಿಸಿದ್ದಾರೆ.
ದೋಣಿ ಮುಳುಗಲು ಏನು ಕಾರಣ ಎನ್ನುವುದನ್ನು ಅಧಿಕಾರಿಗಳು ದೃಢಪಡಿಸಿಲ್ಲ. ಆದರೆ ಸ್ಥಳೀಯ ಮಾಧ್ಯಮಗಳ ಪ್ರಕಾರ, ದೋಣಿ ಕಿಕ್ಕಿರಿದು ಪ್ರಯಾಣಿಕರಿಂದ ತುಂಬಿತ್ತು. ನೈಜೀರಿಯಾದ ಗುಡ್ಡಗಾಡು ಪ್ರದೇಶಗಳಲ್ಲಿ ರಸ್ತೆ ಸಂಪರ್ಕದ ಕೊರತೆ ಮತ್ತು ಪರ್ಯಾಯ ಮಾರ್ಗ ಇಲ್ಲ ಎಂಬ ಕಾರಣಕ್ಕೆ ಸಾಮರ್ಥ್ಯಕ್ಕಿಂತ ಹೆಚ್ಚು ಮಂದಿಯನ್ನು ದೋಣಿಯಲ್ಲಿ ಕರೆದೊಯ್ಯುವುದು ಸಾಮಾನ್ಯ.