ಮಂಗಳೂರು (ದಕ್ಷಿಣ ಕನ್ನಡ): ಬೋಳಿಯಾರ್ ನಲ್ಲಿ ಬಿಜೆಪಿ ಕಾರ್ಯಕರ್ತರು ಅನುಮತಿ ಪಡೆಯದೆ ರ್‍ಯಾಲಿ ನಡೆಸಿದ್ದಾರೆ. ಪಕ್ಷದ ವಿಜಯೋತ್ಸವ ವೇಳೆ ಕಾರ್ಯಕರ್ತರಲ್ಲಿ ನಾಯಕರು ನಡೆದುಕೊಳ್ಳುವ ರೀತಿಯನ್ನು ತಿಳಿಸಬೇಕು. ಅದನ್ನು ಬಿಟ್ಟು ಶಾಸಕರ ಮೇಲೆ ಗೂಬೆ ಕೂರಿಸುವುದು ಎಷ್ಟು ಸರಿ ಎಂದು ತೊಕ್ಕೊಟ್ಟಿನಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಅಭಿಷೇಕ್ ಉಳ್ಳಾಲ್ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಶಾಂತಿಯನ್ನು ಕೆಡಿಸಿರುವ ಇತಿಹಾಸವೇ ಇಲ್ಲ. ಯು.ಟಿ ಖಾದರ್ ವೈರಿ ಎಂದು ಹೇಳುವವರು ಕಾನೂನು ವಿರುದ್ಧವಾಗಿ ಇರುವವರು. ಬೋಳಿಯಾರು ಪ್ರಕರಣದಲ್ಲಿ ಸಿಸಿಟಿವಿ ಫೂಟೇಜ್ ಆಧಾರದಲ್ಲಿ ತನಿಖೆ ನಡೆಯುತ್ತಿದ್ದು, ಸತ್ಯಾಂಶವನ್ನು ಪೊಲೀಸ್ ಇಲಾಖೆ ಜನತೆಯ ಮುಂದೆ ತಂದಿದೆ. ಈ ಬಗ್ಗೆ ಬಿಜೆಪಿ ನಾಯಕರ ಸಲಹೆಯ ಅಗತ್ಯವಿಲ್ಲ. ಭಾರತದವನ್ನು ಪಾಕಿಸ್ತಾನದವ ಅಂದರೆ ಸುಮ್ಮನೆ ಯಾರೂ ಕೂರುವುದಿಲ್ಲ. ಇಡೀ ಘಟನೆಯನ್ನು ಶಾಸಕರ ತಲೆಗೆ ಕಟ್ಟಿಕೊಡುವುದು ಹಾಸ್ಯಾಸ್ಪದ ಎಂದರು.