ಮುಂಬೈ: ಬಾಲಿವುಡ್ ನಟ ಶ್ರೇಯಸ್ ತಲ್ಪಡೆ ಅವರಿಗೆ ಹೃದಯಾಘಾತವಾಗಿದ್ದು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
‘ವೆಲ್ಕಮ್ ಟು ದಿ ಜಂಗಲ್’ ಸಿನಿಮಾ ಶೂಟಿಂಗ್ ನಲ್ಲಿ ಭಾಗವಹಿಸಿ ಅವರು ಮನೆಗೆ ತೆರಳುವ ವೇಳೆಯಲ್ಲಿ ಹೃದಯಾಘಾತ ಸಂಭವಿಸಿತು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.
ಲಘು ಹೃದಯಾಘಾತವಾಗಿರುವ ಹಿನ್ನೆಲೆಯಲ್ಲಿ ಅವರನ್ನು ಮುಂಬೈನ ಅಂಧೇರಿ ಪ್ರದೇಶದ ಬೆಲ್ಲೆವ್ಯೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೇಯಸ್ ತಲ್ಪಡೆ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಿನ್ನೆ ರಾತ್ರಿ 10 ಗಂಟಗೆ ವೈದ್ಯರು ಆಂಜಿಯೋಪ್ಲಾಸ್ಟಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಶ್ರೇಯಸ್ ತಲ್ಪಡೆ ಅವರು 2002ರಲ್ಲಿ ಬಾಲಿವುಡ್ ಸಿನಿಮಾರಂಗಕ್ಕೆ ಕಾಲಿಟ್ಟರು. ‘ಆಂಖೇ’ ಅವರು ನಟಿಸಿದ ಮೊದಲ ಸಿನಿಮಾ. 2007ರಲ್ಲಿ ತೆರೆಕಂಡ ‘ಓಂ ಶಾಂತಿ ಓಂ’ ಸಿನಿಮಾದಲ್ಲಿ ಶಾರುಖ್ ಗೆಳೆಯನಾಗಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದರು. ‘ಗೋಲ್ ಮಾಲ್ ರಿಟರ್ನ್ಸ್’, ಗೋಲ್ಮಾಲ್ 3’, ‘ಹೌಸ್ಫುಲ್ 2’ ಸೇರಿದಂತೆ ಹಲವು ಹಾಸ್ಯ ಪ್ರಧಾನ ಸಿನಿಮಾಗಳಲ್ಲಿ ನಟಿಸಿ ಅವರು ಗಮನ ಸೆಳೆದಿದ್ದಾರೆ. ಕೆಲವೇ ದಿನಗಳಲ್ಲೇ ನಟ ಆಸ್ಪತ್ರೆಯಿಂದ ಮನೆಗೆ ವಾಪಸಾಗಲಿದ್ದಾರೆ.