ನವದೆಹಲಿ: ದೆಹಲಿಯಿಂದ ಬನಾರಸ್‌ಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಬಾಂಬ್ ಇದೆ ಎಂಬ ಸುದ್ದಿಯಿಂದಾಗಿ ಸಂಚಲನ ಉಂಟಾಗಿತ್ತು. ಇಂಡಿಗೋ ವಿಮಾನ ಇಂದು ಮಂಗಳವಾರ ಬೆಳಗ್ಗೆ ದೆಹಲಿಯಿಂದ ಬನಾರಸ್‌ಗೆ ಟೇಕ್ ಆಫ್ ಆಗಬೇಕಿತ್ತು, ಆಗ ವಿಮಾನದಲ್ಲಿ ಬಾಂಬ್ ಇದೆ ಎಂಬ ಸುದ್ದಿ ತಿಳಿಯಿತು. ಇದಾದ ಬಳಿಕ ಐಜಿಐ ವಿಮಾನ ನಿಲ್ದಾಣದಲ್ಲಿ ತರಾತುರಿಯಲ್ಲಿ ವಿಮಾನದ ತುರ್ತು ತೆರವು ಕಾರ್ಯ ನಡೆಸಲಾಯಿತು.
ಬೆಳಗ್ಗೆ ೫.೩೦ರ ಸುಮಾರಿಗೆ ವಿಮಾನ ಹೊರಡಲು ತಯಾರಾಗುತ್ತಿತ್ತು. ಆ ವೇಳೆಗೆ, ಬಾಂಬ್ ಬೆದರಿಕೆ ಬಂದಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ದೆಹಲಿ ಅಗ್ನಿಶಾಮಕ ದಳದ ಪ್ರಕಾರ, ಇಂದು ಮುಂಜಾನೆ ೫:೩೫ಕ್ಕೆ ದೆಹಲಿಯಿಂದ ವಾರಣಾಸಿಗೆ ಹೋಗುತ್ತಿದ್ದ ವಿಮಾನದಲ್ಲಿ ಬಾಂಬ್ ಇದೆ ಎಂಬ ಸುದ್ದಿ ಇತ್ತು. ಕ್ವಿಕ್ ರೆಸ್ಪಾನ್ಸ್ ಟೀಮ್‌ಗಳು (ಕ್ಯೂಆರ್‌ಟಿ) ಸ್ಥಳಕ್ಕೆ ಧಾವಿಸಿ, ಪ್ರಯಾಣಿಕರನ್ನು ಸ್ಥಳಾಂತರಿಸಿವೆ.
ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ವಿಮಾನದಲ್ಲಿದ್ದ ಪ್ರಯಾಣಿಕರನ್ನು ತುರ್ತು ನಿರ್ಗಮನದ ಮೂಲಕ ಸ್ಥಳಾಂತರಿಸಲಾಗಿದೆ ಎಂದು ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಖಚಿತಪಡಿಸಿದ್ದಾರೆ. ವಿಮಾನವನ್ನು ಪ್ರತ್ಯೇಕ ಪ್ರದೇಶಕ್ಕೆ ಕೊಂಡೊಯ್ಯಲಾಗಿದೆ. ಭದ್ರತಾ ಏಜೆನ್ಸಿ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.