ಅಯೋಧ್ಯೆ: ಬೆಂಗಳೂರಿಂದ ಅಯೋಧ್ಯೆ ನಡುವೆ ಸಂಚರಿಸುವ ವಿಮಾನಕ್ಕೆ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಅಯೋಧ್ಯೆ ವಾಲ್ಮೀಕಿ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಗಿದೆ. ವಿಮಾನದಲ್ಲಿ ಪರಿಶೀಲನೆ ಬಳಿಕ ಯಾವುದೇ ಬಾಂಬ್ ಪತ್ತೆಯಾಗದ ಹಿನ್ನೆಲೆ ಹುಸಿಬಾಂಬ್ ಎಂದು ಅಯೋಧ್ಯೆ ಏರ್‌ಪೋರ್ಟ್ ನಿರ್ದೇಶಕ ವಿನೋದ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿಂದ ಅಯೋಧ್ಯೆಗೆ 173 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಆಕಾಶ ಏರ್ಲೈನ್ಸ್ಗೆ ಹುಸಿಬಾಂಬ್ ಬೆದರಿಕೆ ಬಂದಿದೆ. ತಕ್ಷಣ ತುರ್ತು ಭೂಸ್ಪರ್ಶ ಮಾಡಿ ಒಟ್ಟು ಪ್ರಯಾಣಿಕರನ್ನು ಪ್ರಾಣಾಪಾಯದಿಂದ ಪಾರು ಮಾಡಲಾಗಿದೆ.
ಅಯೋಧ್ಯೆ ಏರ್‌ಪೋರ್ಟ್ ನಿರ್ದೇಶಕ ವಿನೋದ್ ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಬೆಂಗಳೂರು ಟು ಅಯೋಧ್ಯೆ ನಡುವೆ ಸಂಚರಿಸುವ ಆಕಾಶ ಏರ್‌ಲೈನ್ಸ್ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಭಾನುವಾರ ಮಧ್ಯಾಹ್ನ 1:30ರ ಸುಮಾರಿಗೆ ಬಾಂಬ್ ಬೆದರಿಕೆ ಕರೆ ಮಾಹಿತಿ ಬಂದ ತಕ್ಷಣ ಎಮರ್ಜೆನ್ಸಿ ಲ್ಯಾಂಡಿಂಗ್ಗೆ ಆದೇಶಿಸಲಾಯಿತು ಎಂದಿದ್ದಾರೆ.
ವಿಮಾನ ಭೂಸ್ಪರ್ಶ ಮಾಡುತ್ತಿದ್ದಂತೆ ಪ್ರಯಾಣಿಕರ ಲಗೇಜ್ ಮತ್ತು ವಿಮಾನವನ್ನು ಕೂಲಂಕಷವಾಗಿ ಪರಿಶೀಲನೆ ಮಾಡಿದ್ದು, ಯಾವುದೇ ರೀತಿಯ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ. ಅದೊಂದು ಹುಸಿಬಾಂಬ್ ಬೆದರಿಕೆ ಆಗಿದೆ.
ವಿಮಾನದಲ್ಲಿ 173 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಸದ್ಯ ಎಲ್ಲಾ ಪ್ರಯಾಣಿಕರು ಈಗ ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ.