ಮಂಡ್ಯ: ಬೋರ್ ವೆಲ್ ಅಳವಡಿಸಿಕೊಳ್ಳವ ಕಾಮಗಾರಿಗೆ ತಡೆ ನೀಡಿರುವ ರಾಜ್ಯ ಸರ್ಕಾರ ಮೌಖಿಕ ಆದೇಶ ವಾಪಸ್ ಪಡೆದು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕೆ.ಆರ್.ಪೇಟೆಯ ತಾಲ್ಲೂಕು ಬಿಜೆಪಿಯ ಮಾಜಿ ಅಧ್ಯಕ್ಷ ಬೂಕಳ್ಳಿ ಮಂಜು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೃಷಿ ಕಾರ್ಯಕ್ಕೆ ರೈತರು ಅಕ್ರಮ- ಸಕ್ರಮ ಕಾಯ್ದೆಯಡಿ ಟಿಸಿ, ವಿದ್ಯುತ್ ಕಂಬ, ಹಾಗೂ ವೈರ್ ಗಳ ಮೂಲಕ ವಿದ್ಯುತ್ ಸಂಪರ್ಕ ಪಡೆದು ಜಮೀನಿನಲ್ಲಿ ಬೋರ್ ವೆಲ್ ಅಳವಡಿಸುವ ಕಾಮಗಾರಿ ಕೈಗೊಂಡಿದ್ದಾರೆ. ಈಗಾಗಲೇ ಬೋರ್ ವೆಲ್ ತೆಗೆಸಿ ವಿದ್ಯುತ್ ಇಲಾಖೆಗೆ ಸಾವಿರಾರು ರೂ ಹಣ ಕಟ್ಟಿರುವ ರೈತರು ವಿದ್ಯುತ್ ಸಂಪರ್ಕ ಇಲ್ಲದೆ ಬೆಳೆ ಬೆಳೆಯದೆ ಕಂಗಾಲಾಗಿದ್ದಾರೆ ಎಂದರು.
ಸುಮಾರು 20 ಸಾವಿರ ಹಣ ಕಟ್ಟಿ ರೈತರು ಪರದಾಡುತ್ತಿದ್ದಾರೆ. ನೂತನವಾಗಿ ಐಪಿ ಸೆಟ್ ಅಳವಡಿಸಿಕೊಳ್ಳಲು ಲಕ್ಷಾಂತರ ಹಣ ವ್ಯಯಿಸಿ ವಿದ್ಯುತ್ ಸಂಪರ್ಕಕ್ಕೆ ಕಾಯುತ್ತಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಆದೇಶ ವಾಪಸ್ ಪಡೆದು ರೈತರ ನೆರವಿಗೆ ಮುಂದಾಗುವಂತೆ ಆಗ್ರಹಿಸಿದರು.
ರಾಜ್ಯದಲ್ಲಿ ಸುಮಾರು 1 ಲಕ್ಷ ಹಾಗೂ ಜಿಲ್ಲೆಯಲ್ಲಿ ಸಾವಿರಾರು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಸ್ಕಾಂ ವ್ಯಾಪ್ತಿಯಲ್ಲಿ 900 ಕೋಟಿ, ಚೆಸ್ಕಾಂ ವ್ಯಾಪ್ತಿಯಲ್ಲಿ 400 ಕೋಟಿಯ ಕಾಮಗಾರಿ ಸ್ಥಗಿತಗೊಂಡಿದೆ. ಸರ್ಕಾರ ಕೂಡಲೇ ಕಾಮಗಾರಿ ಶುರುಮಾಡಬೇಕು. ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತಲು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಅವರು ಚರ್ಚೆ ಮಾಡಲಿದ್ದಾರೆ ಎಂದು ಬೂಕಳ್ಳಿ ಮಂಜು ತಿಳಿಸಿದರು.