ಬೆಂಗಳೂರು : ಇಂದು ಡಿಕೆಶಿ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯನವರಿಗೆ ಬ್ರೇಕ್‌ಫಾಸ್ಟ್ ಆಯೋಜಿಸಿಲಾಗಿದ್ದು, ಡಿಕೆಶೀ ಆಹ್ವಾನದ ಮೇರೆಗೆ ಸಿದ್ದರಾಮಯ್ಯನವರು ಬೆಳಗ್ಗೆ ಕಾವೇರಿ ನಿವಾಸದಿಂದ ಹೊರಟುಡಿಕೆಶಿ ಮನೆಗೆ ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಮನೆ ಮುಂದಿನ ರಸ್ತೆಯನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದಾರೆ.
ಸಿಎಂಗೆ ಅವರಿಗೆ ಡಿಕೆಶಿ ಮನೆಯಲ್ಲಿ ಬೇಕ್‌ಫಾಸ್ಟ್ ವ್ಯವಸ್ಥೆ ಮಾಡಿದ್ದರೆ, ಸಿಎಂ ಜೊತೆ ಬರುವ ಶಾಸಕರಿಗೆ ಡಿಕೆ ಸುರೇಶ್ ನಿವಾಸದಲ್ಲಿ ಉಪಹಾರ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಶನಿವಾರ ಸಿಎಂ ಕಾವೇರಿ ನಿವಾಸದಲ್ಲಿ ಡಿಸಿಎಂಗೆ ಬ್ರೇಕ್‌ಫಾಸ್ಟ್ ಆಯೋಜನೆ ಮಾಡಲಾಗಿತ್ತು. ಅಂದೇ ಸಿಎಂ ಗೂ ತಮ್ಮ ಮನೆಗೆ ಬ್ರೇಕ್‌ಫಾಸ್ಟ್‌ಗೆ ಬರುವಂತೆ ಡಿಕೆಶಿ ಆಹ್ವಾನಿಸಿದ್ದು, ಹೀಗಾಗಿ ಇಂದು ಸಿಎಂಗೆ ಡಿಸಿಎಂ ಬ್ರೇಕ್‌ಫಾಸ್ಟ್ ಆತಿಥ್ಯ ಇರಲಿದ್ದು, ಸಹಜವಾಗಿ ರಾಜಕೀಯ ಕುತೂಹಲ ಮೂಡಿಸಿದೆ.
ಸಿದ್ದರಾಮಯ್ಯನವರಿಗೆ ನಾಟಿ ಕೋಳಿ ಇಷ್ಟ ಎನ್ನುವ ಕಾರಣಕ್ಕೆ ಬೆಳಗ್ಗಿನ ತಿಂಡಿಗೆ ನಾಟಿ ಕೋಳಿ ಸಾರಿನ ಆತಿಥ್ಯ ನೀಡಲು ಡಿಕೆಶಿ ಮುಂದಾಗಿದ್ದಾರೆ. ಬೆಳಗ್ಗೆ ತಿಂಡಿಗೆ ಇಡ್ಲಿ ನಾಟಿ ಕೋಳಿ ಸಾರು ಹಾಗೂ ನಾಟಿಕೋಳಿ ಫ್ರೈ ಸ್ಪೆಷಲ್ ಮೆನು ಸಿದ್ಧಪಡಿಸಲಾಗಿದ್ದು, ಡಿಕೆಶಿಯ ಸರ್ಕಾರಿ ನಿವಾಸದಲ್ಲಿ ಸಾಕಿದ್ದ ಕನಕಪುರದ ನಾಟಿ ಕೋಳಿಯನ್ನೇ ಸಿಎಂಗೆ ಉಣಬಡಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಪುಟ ಸದಸ್ಯ, ಗೃಹ ಸಚಿವ ಡಾ ಪರಮೇಶ್ವರ್, ನಮ್ಮ ನಾಯಕರು ಮತ್ತೆ ಉಪಾಹಾರಕ್ಕಾಗಿ ಒಟ್ಟಿಗೆ ಸೇರುತ್ತಿರುವುದು ಒಳ್ಳೆಯದು. ಕಳೆದ ಒಂದು ತಿಂಗಳಿನಿಂದ ನಡೆದ ಘಟನೆಗಳ ಶಾಂತಿಯುತ ಇತ್ಯರ್ಥವನ್ನು ನಾವು ಬಯಸುತ್ತೇವೆ. ಹೈಕಮಾಂಡ್ ಸೂಚಿಸಿದಂತೆ, ಅವರು ಎರಡನೇ ಬಾರಿಗೆ ಸಭೆ ಸೇರುತ್ತಿದ್ದಾರೆ ಈ ವೇಳೆ ಎಲ್ಲಾ ಸಮಸ್ಯೆಗಳು ಇತ್ಯರ್ಥವಾಗಿವೆ ಎಂದು ಹೇಳಿದ್ದಾರೆ.
ಮುಂದುವರೆಸುತ್ತಾ ಇದು ಕೇವಲ ಪರಸ್ಪರ, ಬೇರೇನೂ ಅಲ್ಲ. ಸಿದ್ದರಾಮಯ್ಯ ಶಿವಕುಮಾರ್ ಅವರಿಗೆ ಕರೆ ಮಾಡಿದ್ದರು, ಈಗ ಶಿವಕುಮಾರ್ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ನಾವು ಸಾಮಾನ್ಯವಾಗಿ ಸಿಎಲ್‌ಪಿ ಸಭೆ ನಡೆಸುತ್ತೇವೆ, ನಂತರ ಒಟ್ಟಿಗೆ ಭೋಜನ ಮಾಡುತ್ತೇವೆ. ಎಲ್ಲವೂ ಸರಾಗವಾಗಿ ನಡೆಯುತ್ತಿದೆ. ವಿಭಿನ್ನ ಜನರು ವಿಭಿನ್ನ ಆಕಾಂಕ್ಷೆಗಳನ್ನು ಹೊಂದಿರುತ್ತಾರೆ. ಅದು ತಪ್ಪು ಎಂದು ನಾನು ಭಾವಿಸುವುದಿಲ್ಲ. ಸ್ವಾಭಾವಿಕವಾಗಿ, ಸಮಯ ಬಂದಾಗ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಎಂದು ತಿಳಿಸಿದರು.



