ಕಾರವಾರ: ಜಿಲ್ಲೆಯ ಅಂಕೋಲಾ ತಾಲೂಕಿನ ಮಂಜಗುಣಿ – ಗಂಗಾವಳಿ ಸೇತುವೆ ಜನರ ಮತ್ತು ದ್ವಿಚಕ್ರ ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ. ಈ ಮೂಲಕ ಇಲ್ಲಿನ ಗ್ರಾಮಸ್ಥರ ದಶಕಗಳ ಹೋರಾಟಕ್ಕೆ ಜಯ ಸಿಕ್ಕಿದೆ. ಇಲ್ಲಿ ಸೇತುವೆ ಮಂಜೂರಾಗಿದ್ದರೂ ನಿರ್ಮಾಣ ಕಾರ್ಯ ಮಾತ್ರ ವಿಳಂಬವಾಗಿತ್ತು. ಇದೀಗ ಸೇತುವೆ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಸೇತುವೆಯಲ್ಲಿ ಜನರು ಮತ್ತು ದ್ವಿಚಕ್ರ ವಾಹನಗಳು ಸಂಚರಿಸುತ್ತಿವೆ.
ಗಂಗಾವಳಿ ಸೇತುವೆ ಈ ಭಾಗದ ಗ್ರಾಮಸ್ಥರ ದಶಕಗಳ ಕನಸಾಗಿತ್ತು. ಸೇತುವೆ ಮಂಜೂರಾದರೂ ನಿರ್ಮಾಣ ಕಾರ್ಯ ಮಾತ್ರ ಆಮೆಗತಿಯಲ್ಲಿ ಸಾಗಿತ್ತು. ಜೊತೆಗೆ ಕೊರೊನಾ ಮಹಾಮಾರಿಯಿಂದಾಗಿ ಸೇತುವೆ ನಿರ್ಮಾಣ ವಿಳಂಬವಾಗಿತ್ತು. ಇದೀಗ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದು, ಸೇತುವೆಯ ಎರಡೂ ಕಡೆ ಸಂಪರ್ಕ ಕಲ್ಪಿಸುವ ಸುಸಜ್ಜಿತ ರಸ್ತೆ ನಿರ್ಮಾಣವಾಗಬೇಕಿದೆ.
ಪ್ರತಿನಿತ್ಯ ವಿದ್ಯಾರ್ಥಿಗಳು, ಯುವಕರು, ಮಹಿಳೆಯರು ಅಂಕೋಲಾಕ್ಕೆ ವಿವಿಧ ಕೆಲಸ ಕಾರ್ಯಗಳಿಗೆ ತೆರಳುತ್ತಾರೆ. ಈ ಹಿಂದೆ ಬಾರ್ಜ್ ಓಡಾಟ ಇದ್ದ ಸಂದರ್ಭದಲ್ಲಿ ನದಿ ದಾಟಲು ಬಾರ್ಜ್‌ಗಾಗಿ ಕಾಯಬೇಕಾದ ಪರಿಸ್ಥಿತಿ ಇತ್ತು. ಆದರೆ ಇದೀಗ ಸೇತುವೆ ನಿರ್ಮಾಣ ಆಗಿರುವುದರಿಂದ ಕೆಲಸಕ್ಕೆ ತೆರಳಲು ಅನುಕೂಲವಾಗಿದೆ. ಸೇತುವೆ ಮೂಲಕ ಅಂಕೋಲಾಕ್ಕೆ ಕೇವಲ ೧೦ ಕಿ.ಮೀ ದೂರವಿರುವುದರಿಂದ ಈ ಭಾಗದ ಜನರಿಗೆ ಸಾಕಷ್ಟು ಸಮಯ ಉಳಿದಂತಾಗುತ್ತದೆ. ಇನ್ನು ಸೇತುವೆಯ ಸಂಪರ್ಕ ರಸ್ತೆ ಕಾರ್ಯವನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಿದಲ್ಲಿ ದೊಡ್ಡ ವಾಹನಗಳ ಓಡಾಟವೂ ಸಾಧ್ಯವಾಗಲಿದ್ದು, ಈ ಭಾಗದ ಅಭಿವೃದ್ಧಿಗೂ ಸಾಕಷ್ಟು ನೆರವಾಗಲಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ. ಸೇತುವೆ ನಿರ್ಮಾಣವಾಗಿರುವುದು ಇಲ್ಲಿನ ಜನರಿಗೆ ಸಾಕಷ್ಟು ಅನುಕೂಲವನ್ನು ಮಾಡಿದೆ. ಆದಷ್ಟು ಬೇಗ ಸಂಬಂಧಪಟ್ಟವರು ಸುಸಜ್ಜಿತ ಸಂಪರ್ಕ ರಸ್ತೆ ನಿರ್ಮಾಣ ಮಾಡಿದರೆ ಇನ್ನೂ ಅನುಕೂಲವಾಗುತ್ತದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.