ಸುತ್ತೂರು (ಮೈಸೂರು ಜಿಲ್ಲೆ): ‘ಮೈಕ್ರೊಫೈನಾನ್ಸ್ ಕಂಪನಿಗಳಿಗೆ ಕಡಿವಾಣ ಹಾಕಲು ಶೀಘ್ರದಲ್ಲೇ ಸುಗ್ರೀವಾಜ್ಞೆ ತಂದು ಕ್ರಮ ಕೈಗೊಳ್ಳುತ್ತೇವೆ. ಸಾಲಗಾರರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಸರ್ಕಾರ ನಿಮ್ಮ ಜೊತೆಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಯ ನೀಡಿದರು.
ಇಲ್ಲಿ ಸುತ್ತೂರು ಮಠದಿಂದ ಶುಕ್ರವಾರ ಆಯೋಜಿಸಿದ್ದ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಆರ್‌ಬಿಐ (ಭಾರತೀಯ ರಿಸರ್ವ್ ಬ್ಯಾಂಕ್) ನಿಯಮಾವಳಿ ಉಲ್ಲಂಘಿಸುವ, ಹೆಚ್ಚಿನ ಬಡ್ಡಿದರ ವಸೂಲು ಮಾಡುವ ಹಾಗೂ ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಮೈಕ್ರೊ ಫೈನಾನ್ಸ್ ಸಂಸ್ಥೆಗಳ ಮೇಲೆ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲಿದೆ. ಜನರು ಆತಂಕಕ್ಕೆ ಒಳಗಾಗಿ ಆತ್ಮಹತ್ಯೆಯಂತಹ ತಪ್ಪು ನಿರ್ಧಾರಗಳನ್ನು ಮಾಡಬಾರದು’ ಎಂದು ಕೋರಿದರು.
‘ಜನರು ಲಭ್ಯವಾಗುವ ಕಡೆಗಳಲ್ಲಿ ಅನಿವಾರ್ಯದಿಂದ ಸಾಲ ಪಡೆಯುತ್ತಿದ್ದಾರೆ. ಖಾಸಗಿ ಫೈನಾನ್ಸ್ ಸಂಸ್ಥೆಯವರು, ಲೇವಾದೇವಿಗಾರರು ನೀಡುವ ಸಾಲದ ಮೇಲೆ ಹೆಚ್ಚಿನ ಬಡ್ಡಿ ದರ ಹಾಕುವುದಲ್ಲದೇ, ರೌಡಿಗಳು ಹಾಗೂ ಗೂಂಡಾಗಳ ಮೂಲಕ ಜನರನ್ನು ಹೆದರಿಸಿ, ಅಮಾನವೀಯ ರೀತಿಯಲ್ಲಿ ಸಾಲ ವಸೂಲಾತಿಯಲ್ಲಿ ತೊಡಗಿದ್ದಾರೆ. ಮೈಕ್ರೊಫೈನಾನ್ಸ್ ಸಂಸ್ಥೆಗಳು ವಾರ್ಷಿಕವಾಗಿ ಶೇ. 28ರಿಂದ 30ರಷ್ಟು ಬಡ್ಡಿ ವಸೂಲಿ ಮಾಡುತ್ತಿವೆ. ಇದರಿಂದ ಸಾಲ ಪಡೆದ ಜನರು ಬೇಸತ್ತು, ಆತ್ಮಹತ್ಯೆಗೆ ಶರಣಾಗುತ್ತಿರುವುದು, ಮನೆ ಬಿಟ್ಟು ಹೋಗುತ್ತಿರುವುದನ್ನು ಗಮನಿಸಲಾಗಿದೆ’ ಎಂದರು.
‘ಮೈಕ್ರೊ ಫೈನಾನ್ಸ್ ವ್ಯವಸ್ಥೆಗಳು ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಆರ್‌ಬಿಐ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ಅವುಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಸುಗ್ರೀವಾಜ್ಞೆ ಹೊರಡಿಸಿ, ಕಿರುಕುಳ ನೀಡುತ್ತಿರುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅದಕ್ಕೆ ಅಗತ್ಯ ಕಾನೂನು ತರಲಾಗುತ್ತಿದೆ’ ಎಂದು ತಿಳಿಸಿದರು.
‘ಸಾಲ ಮರುಪಾವತಿಸುವಂತೆ ಯಾರಾದರೂ ತೊಂದರೆ ಕೊಟ್ಟಲ್ಲಿ ಜಿಲ್ಲಾಧಿಕಾರಿ ಕಚೇರಿಗೋ, ಪೊಲೀಸ್ ಠಾಣೆಗೋ ದೂರು ಕೊಡಬೇಕು. ಎಲ್ಲ ಜಿಲ್ಲಾಧಿಕಾರಿ ಕಚೇರಿಗಳಲ್ಲೂ ಸಹಾಯವಾಣಿ ತೆರೆಯುವಂತೆ ಆದೇಶಿಸಲಾಗಿದೆ. ಅಲ್ಲಿಗೆ ಕರೆ ಮಾಡಿ ಮಾಹಿತಿ ನೀಡಿ’ ಎಂದು ಕೋರಿದರು. ‘ಸಹಾಯವಾಣಿ ಆರಂಭಿಸಿದ್ದೀರಲ್ಲವೇ?’ ವೇದಿಕೆಯಲ್ಲಿದ್ದ ಮೈಸೂರು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾ ನಾಗ್ ಅವರನ್ನು ಕೇಳಿದರು. ಆ ಅಧಿಕಾರಿಗಳು ಹೌದು ಎಂದು ತಿಳಿಸಿದರು.
‘ಅಸಲಿಗಿಂತ ಬಡ್ಡಿ ಜಾಸ್ತಿ ವಸೂಲಿ ಮಾಡದಂತೆ ಹಾಗೂ ಸಂಜೆ 5ರ ನಂತರ ಮನೆಗಳ ಬಳಿಗೆ ಬಾರದಂತೆ ನೋಡಿಕೊಳ್ಳಲು ಕಾನೂನು ತರಲಾಗುವುದು’ ಎಂದು ಮುಖ್ಯಮಂತ್ರಿ ಹೇಳಿದರು.
ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಕನಕಗಿರಿ ಜೈನ ಮಠದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಚಿವರಾದ ಎಚ್.ಕೆ. ಪಾಟೀಲ, ಡಾ.ಎಚ್.ಸಿ. ಮಹದೇವಪ್ಪ, ಎನ್.ಎಸ್. ಬೋಸರಾಜು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ, ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಶಾಸಕರಾದ ಕೆ.ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ, ವೀರೇಂದ್ರ ಪಪ್ಪಿ, ಡಿ.ರವಿಶಂಕರ್, ಎಚ್.ಎಂ. ಗಣೇಶ್‌ಪ್ರಸಾದ್, ಎಸ್.ಟಿ. ಸೋಮಶೇಖರ್, ಮಂಜುನಾಥ್, ಮಾಜಿ ಸಚಿವೆ ಗೀತಾ ಮಹದೇವಪ್ರಸಾದ್, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಕಾಡಾ ಅಧ್ಯಕ್ಷ ಮರಿಸ್ವಾಮಿ ಪಾಲ್ಗೊಂಡಿದ್ದರು.