ಚಾಮರಾಜನಗರ: ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿಯು ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಹೋರಾಟದ ದಿಕ್ಕನ್ನು ಬದಲಿಸಿತು ಎಂದು ಹರವೇ ವಿರಕ್ತಮಠದ ಶ್ರೀ ಸರ್ಪಭೂಷಣ ಸ್ವಾಮೀಜಿಯವರು ತಿಳಿಸಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ ಆಯೋಜಿಸಿದ್ದ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ರಂಗಸ್ವಾಮಿ ರವರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಉದ್ಘಾಟಿಸಿ ಮಾತನಾಡುತ್ತ ಸ್ವಾತಂತ್ರ್ಯ ಚಳುವಳಿಯಲ್ಲಿ ಲಕ್ಷಾಂತರ ಹೋರಾಟಗಾರರು ತ್ಯಾಗ ಬಲಿದಾನವನ್ನು ಮಾಡಿದ್ದಾರೆ. ಅವರೆಲ್ಲರ ಸ್ಮರಣೆ ಮಾಡುವುದು ಅವರಿಗೆ ಸಲ್ಲಿಸುವ ಗೌರವವೆಂದು ತಿಳಿಸಿದರು.
ಚಾಮರಾಜನಗರದಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗೆ ಚಳುವಳಿಯಲ್ಲಿ ಪಾಲ್ಗೊಂಡು ಜೈಲುವಾಸ ಅನುಭವಿಸಿದ ಸ್ವಾತಂತ್ರ್ಯ ಹೋರಾಟಗಾರ ಶ್ರೀ ರಂಗಸ್ವಾಮಿ ರವರ ಹೆಸರಿನಲ್ಲಿ ನೀಡುವ ರಂಗಸ್ವಾಮಿ ಪ್ರಶಸ್ತಿಯನ್ನು ಚಾಮರಾಜನಗರ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿಗಳಾದ ಗೀತಾ ಹುಡೇದ ರವರಿಗೆ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಮಾತನಾಡಿ ಪ್ರಶಸ್ತಿ ಮತ್ತಷ್ಟು ಜವಾಬ್ದಾರಿಯನ್ನು ಹೆಚ್ಚಿಸಿದೆ. ಸಮಾಜಕ್ಕೆ ನಾವು ನೀಡುವ ಪ್ರತಿ ಸೇವೆಯು ಅಮೂಲ್ಯವಾದದ್ದು. ರಾಷ್ಟ್ರ ಕ್ಕಾಗಿ ಅರ್ಪಿಸಿಕೊಂಡ ಮಹಾನ್ ವ್ಯಕ್ತಿಯ ಹೆಸರಿನಲ್ಲಿ ನೀಡುವ ಪ್ರಶಸ್ತಿ ನನಗೆ ದೊರೆತಿರುವುದು ಬಹಳ ಸಂತೋಷವೆಂದು , ಮತ್ತಷ್ಟು ಸಮಾಜಮುಖಿ ಕಾರ್ಯವನ್ನು ಮಾಡಲು ಇದು ಸ್ಪೂರ್ತಿಯನ್ನು ನೀಡುತ್ತದೆ ಎಂದು ತಿಳಿಸಿ, ಕೃತಜ್ಞತೆ ಸಲ್ಲಿಸಿದರು.
ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್ ಋಗ್ವೇದಿ ಮಾತನಾಡಿ ಭಾರತದ ಸ್ವಾತಂತ್ರ್ಯ ಹೋರಾಟ ಇಡೀ ವಿಶ್ವದಲ್ಲೇ ವಿಶೇಷವಾದದ್ದು . ಸತ್ಯ ,ಅಹಿಂಸೆ, ಸತ್ಯಾಗ್ರಹ, ತ್ಯಾಗ ಬಲಿದಾನದ ಗಳಿಸಿದ ಸ್ವಾತಂತ್ರ. ಕನ್ನಡದ ನೆಲದಲ್ಲಿ ಹೋರಾಟದಲ್ಲಿ ಪಾಲ್ಗೊಂಡು ಲಕ್ಷಾಂತರ ಸ್ವಾತಂತ್ರ ಹೋರಾಟಗಾರರು ತಮ್ಮ ಪ್ರಾಣವನ್ನು ಅರ್ಪಿಸಿಕೊಂಡಿದ್ದಾರೆ. ವೀರ ತ್ಯಾಗಿಗಳ ಕುಟುಂಬವನ್ನು ಗೌರವಿಸಿ ಸಮಾಜದಲ್ಲಿ ಅವರಿಗೆ ಉನ್ನತ ಸ್ಥಾನವನ್ನು ನೀಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಸ್ವಾತಂತ್ರ್ಯ ಚಳುವಳಿ ಹಲವಾರು ಮುಖಗಳಲ್ಲಿ ಆರಂಭವಾಗಿ ಮಂದಗಾಮಿಗಳ ಯುಗ ,ಕ್ರಾಂತಿಕಾರಿಗಳು ಮತ್ತು ಗಾಂಧಿ ಯುಗದ ಮೂಲಕ ಅಂತಿಮ ಸ್ಪರ್ಶ ಸ್ವಾತಂತ್ರ್ಯ ಸಿಕ್ಕಿತು. ಅಸಹಕಾರ ಚಳುವಳಿ , ದಂಡಿ ಸತ್ಯಾಗ್ರಹ ,ಕ್ವಿಟ್ ಇಂಡಿಯಾ ಮೂಮೆಂಟ್ ಪ್ರಮುಖ ಚಳುವಳಿಗಳಾಗಿ ಹೊರಹೊಮ್ಮಿದೆ. ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳುವಳಿ ಅದು ಜನಸಾಮಾನ್ಯರ ಚಳುವಳಿಯಾಗಿ ಸ್ವಾತಂತ್ರದ ಕಿಚ್ಚನ್ನು ದೇಶದ ಮೂಲೆ ಮೂಲೆಗಳಲ್ಲಿ ಹರಡಿ ಬ್ರಿಟಿಷರು ನಡುಗುವಂತೆ ಮಾಡಿದ ಚಳುವಳಿ ಎಂದು, ಸಾವಿರಾರು ಸಂಖ್ಯೆಯಲ್ಲಿ ಮಾಡು ಇಲ್ಲವೇ ಮಡಿ ಹೋರಾಟದಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿಕೊಂಡ ಸಮಸ್ತ ವೀರಭಕ್ತರಿಗೆ ನಮನಗಳನ್ನು ಸಲ್ಲಿಸೋಣ ಎಂದರು.

ಜಿಲ್ಲೆಯ ಪ್ರಮುಖ ಹೋರಾಟಗಾರರಾಗಿದ್ದ ಶ್ರೀ ರಂಗಸ್ವಾಮಿ ರವರ ಹೆಸರಿನಲ್ಲಿ ಪ್ರತಿ ವರ್ಷ ಆಗಸ್ಟ್ 9ರಂದು ಪ್ರಶಸ್ತಿಯನ್ನು ನೀಡಲಾಗುತ್ತಿದ್ದು 11 ವರ್ಷಗಳಿಂದ ನಿರಂತರವಾಗಿ ನೆರವೇರಿಸಿಕೊಂಡು ಬರಲಾಗುತ್ತಿದೆ ಎಂದು ಅಖಿಲ ಕರ್ನಾಟಕ ಕನ್ನಡ ಮಹಾಸಭಾ ರಾಜ್ಯಾಧ್ಯಕ್ಷ ಚಾರಂ ಶ್ರೀನಿವಾಸಗೌಡರವರು ತಿಳಿಸಿ ರಾಷ್ಟ್ರೀಯ ಹೋರಾಟ ಚಾಮರಾಜನಗರದಲ್ಲಿ ಆರಂಭವಾಗಿದ್ದು ತಗಡೂರು ರಾಮಚಂದ್ರರಾವ್, ಎಂಎನ್ ಜೋಯಿಸ್ ರವರ ನೇತೃತ್ವದಲ್ಲಿ ಮೈಸೂರು ಪ್ರಾಂತ್ಯದಲ್ಲಿ ಪ್ರಭಾವಶಾಲಿಯಾಗಿ ನಡೆದು ಹಳ್ಳಿ ಹಳ್ಳಿಗಳಲ್ಲೂ ಸ್ವಾತಂತ್ರ್ಯದ ಕಿಚ್ಚನ್ನು ಹರಡಿ ರಾಷ್ಟ್ರ ಸಮರ್ಪಿಸುವ ಮನೋಭಾವನೆಯನ್ನು ಮೂಡಿಸಿ ಅಂತಿಮವಾಗಿ 1947ರಲ್ಲಿ ಸ್ವಾತಂತ್ರ್ಯ ಬರಲು ಅವಕಾಶದ ಹೋರಾಟವಾಯಿತು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶೈಲ ಕುಮಾರ್ ಮಾತನಾಡಿ ಸ್ವಾತಂತ್ರ್ಯ ಚಳುವಳಿ ಮಾದರಿಯಾಗಿದೆ. ಜಿಲ್ಲೆಯ ಸ್ವಾತಂತ್ರ್ಯ ಹೋರಾಟದಲ್ಲಿ ಶ್ರೀರಂಗಸ್ವಾಮಿ, ರಂಗಸ್ವಾಮಿ ನಾಯಕ ,ಗೋಪಾಲರಾವ್ ವೆಂಕಟರಾವ್, ಶಂಕರಪ್ಪ , ಸಿದ್ದಪ್ಪ ಗಜಲಕ್ಷ್ಮಿ ಬಾಯಿ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಐಎನ್ಎ ಸೈನ್ಯದಲ್ಲಿದ್ದ ರಾಮರಾವ್ ರವರ ಹೋರಾಟ ಅವಿಸ್ಮರಣೀಯವೆಂದರು.
ಸಭೆಯ ಅಧ್ಯಕ್ಷತೆಯನ್ನು ಖಾದಿ ಗ್ರಾಮೋದ್ಯೋಗ ಇಲಾಖೆಯ ಉಪನಿರ್ದೇಶಕ ರಾಜೇಂದ್ರ ಪ್ರಸಾದ್ ವಹಿಸಿದ್ದರು.
ಸಮಾರಂಭದಲ್ಲಿ ಪೌರಾಯುಕ್ತ ರಾಮದಾಸ್, ವಾರ್ತಾ ಮತ್ತು ಪ್ರಸಾರ ಅಧಿಕಾರಿ ರಮೇಶ್, ಕನ್ನಡ ಹೋರಾಟಗಾರ ಶಾ ಮುರಳಿ, ಅಖಿಲ ಕರ್ನಾಟಕ ಕನ್ನಡ ಮಹಾಸಭೆಯ ಚಾವೆಂ ರಾಜಗೋಪಾಲ್, ಪುಟ್ಟಸ್ವಾಮಿ, ನಿಜದ್ವನಿ ಗೋವಿಂದರಾಜು, ಗಣೇಶ್ ದೀಕ್ಷಿತ್, ರವಿಚಂದ್ರಪ್ರಸಾದ್, ಪುರುಷೋತ್ತಮ್, ಮಾದಪ್ಪ ಉಪಸ್ಥಿತರಿದ್ದರು.