ವರದಿ: ಸತೀಶ್ ಆರಾಧ್ಯ, ಪಿರಿಯಾಪಟ್ಟಣ
ಪಿರಿಯಾಪಟ್ಟಣ:ವಿದ್ಯುತ್ ತಂತಿ ತುಂಡಾಗಿ ಎಮ್ಮೆಯ ಮೇಲೆ ಬಿದ್ದ ಪರಿಣಾಮ ಎಮ್ಮೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಹೆಚ್.ಬೋರೆಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ರೈತ ಜಗದೀಶ್ ಎಂಬ ವ್ಯಕ್ತಿ ತಮ್ಮ ಮನೆ ಮುಂದೆ ಎಂದಿನಂತೆ ಎಮ್ಮೆ ಕಟ್ಟಿಹಾಕಿ ಮೇವು ನೀಡಿದ್ದಾರೆ ಈ ವೇಳೆ ಗ್ರಾಮಕ್ಕೆ ಮುಖ್ಯ ಸಂಪರ್ಕ ಒದಗಿಸುವ ವಿದ್ಯುತ್ ತಂತಿ ತುಂಡಾಗಿ ಎಮ್ಮೆಯ ಮೇಲೆ ಬಿದ್ದ ಪರಿಣಾಮ ಎಮ್ಮೆ ಸಾವನಪ್ಪಿದೆ.

ಕೆಲ ದಿನಗಳಿಂದ ವಿದ್ಯುತ್ ತಂತಿ ಜೋತು ಬಿದ್ದಿದ್ದರು ಚೆಸ್ಕಾಂ ಇಲಾಖೆಯ ಯಾವುದೇ ಅಧಿಕಾರಿ ಮತ್ತು ಸಿಬ್ಬಂದಿ ಆಗಮಿಸಿ ಸರಿಪಡಿಸದೆ ನಿರ್ಲಕ್ಷ ವಹಿಸಿದ ಕಾರಣ ಜೀವನೋಪಾಯಕ್ಕಾಗಿ ಸಾಕಿದ್ದ ಅಂದಾಜು 40 ಸಾವಿರ ಮೌಲ್ಯ ಹಾಗೂ ಪ್ರತಿ ದಿನ 5 ಲೀಟರ್ ಹಾಲು ನೀಡುತ್ತಾ ಕುಟುಂಬ ನಿರ್ವಹಣೆಗೆ ಆಸರೆಯಾಗಿದ್ದ ಎಮ್ಮೆಯನ್ನು ಕಳೆದುಕೊಂಡಿದ್ದು ಸೂಕ್ತ ಪರಿಹಾರ ಒದಗಿಸಿಕೊಡುವಂತೆ ಕುಟುಂಬದವರು ಮನವಿ ಮಾಡಿದ್ದಾರೆ.
ವಿಷಯ ತಿಳಿದು ಘಟನಾ ಸ್ಥಳಕ್ಕೆ ಪಿರಿಯಾಪಟ್ಟಣ ಪೊಲೀಸರು ಹಾಗೂ ಪಶು ವೈದ್ಯಧಿಕಾರಿ ಡಾ.ಸಂದೇಶ್ ಭೇಟಿ ನೀಡಿ ಪರಿಶೀಲಿಸಿದರು.