ಬೆಂಗಳೂರು: ನಾಡಿನೆಲ್ಲೆಡೆ ಸಡಗರ ಸಂಭ್ರಮದಿಂದ ಗೌರಿ ಗಣೇಶ ಹಬ್ಬವನ್ನು ಆಚರಿಸುತ್ತಿದ್ದು, ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ನಿವಾಸದಲ್ಲಿಯೂ ಗಣೇಶ ಚತುರ್ಥಿಯ ಸಂಭ್ರಮ ಮನೆ ಮಾಡಿದೆ. ಸ್ವತಃ ಯಡಿಯೂರಪ್ಪ ಗಣೇಶ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಕೆ ಮಾಡುವ ಮೂಲಕ ಚೌತಿಯನ್ನು ಆಚರಿಸಿದರು.
ಡಾಲರ್ಸ್ ಕಾಲೋನಿಯಲ್ಲಿರುವ ಖಾಸಗಿ ನಿವಾಸ ಧವಳಗಿರಿಯಲ್ಲಿ ಕುಟುಂಬ ಸದಸ್ಯರ ಜೊತೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಗೌರಿ ಗಣೇಶ ಹಬ್ಬವನ್ನು ಆಚರಿಸಿದರು. ನಿವಾಸದಲ್ಲಿ ವಿಶೇಷ ಅಲಂಕಾರ ಮಾಡಿ, ತಳಿರು ತೋರಣವನ್ನು ಸಿಂಗರಿಸಿ ಮಣ್ಣಿನ ಗಣಪನನ್ನು ತಂದು ಪೂಜೆ ಸಲ್ಲಿಕೆ ಮಾಡಲಾಯಿತು. ಪುತ್ರ, ಶಾಸಕ ಬಿ ವೈ ವಿಜಯೇಂದ್ರ ಸೇರಿದಂತೆ ಕುಟುಂಬ ಸದಸ್ಯರ ಜೊತೆ ವಿಶೇಷ ಪೂಜೆ ಸಲ್ಲಿಸಿ ಗಣೇಶ ಹಬ್ಬವನ್ನು ಆಚರಿಸಿದರು. ಈ ವೇಳೆ ನಾಡಿನ ಸಮಸ್ತ ಜನತೆಗೆ ಶುಭಾಶಯ ಕೋರಿದ ಯಡಿಯೂರಪ್ಪ, ಗೌರಿ ಗಣೇಶ ಎಲ್ಲ ವಿಘ್ನಗಳನ್ನು ಪರಿಹರಿಸಿ ಎಲ್ಲರಿಗೂ ಮಂಗಳವನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸಿದರು.