ಮಂಗಳೂರು (ದಕ್ಷಿಣ ಕನ್ನಡ):ಮಂಗಳೂರಿನ ಬಜ್ಪೆಯ ಪೊರ್ಕೊಡಿ ಎಂಬಲ್ಲಿ ಮನೆಗೆ ನುಗ್ಗಿ ಕಳ್ಳತನ ಮಾಡಿದ ಆರೋಪದಲ್ಲಿ ಓರ್ವನನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ವಿನ್ಸೆಂಟ್ ಡಿ ಸೋಜಾ (34) ಎಂದು ಗುರುತಿಸಲಾಗಿದೆ. ಬಂಧಿತನಿಂದ ಚಿನ್ನದ ಕರಿಮಣಿ ಸರ, ಚಿನ್ನದ ನೆಕ್ಲೆಸ್, ಚಿನ್ನದ ಬಳೆಗಳು-2, ಚಿನ್ನದ ಉಂಗುರಗಳು-3, ಒಂದು ಜೊತೆ ಚಿನ್ನದ ಕಿವಿ ಓಲೆ ಮತ್ತು ಒಂದು ಜೊತೆ ಚಿನ್ನದ ಜುಮುಕಿ ಸೇರಿ ಒಟ್ಟು 5 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬಜ್ಪೆ ಗ್ರಾಮದ ಪೊರ್ಕೋಡಿ ದೇವಸ್ಥಾನದ ಕಡೆಗೆ ಹೋಗುವ ರಸ್ತೆಯ ಕರೋಡಿ ಎಂಬಲ್ಲಿ ಮನೆಗೆ ಕನ್ನಹಾಕಿ ಮಲಗುವ ಕೋಣೆಯಲ್ಲಿದ್ದ ಕಾಪಟನ್ನು ಒಡೆದು 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿತ್ತು. ಈ ಸಂಬಂಧ ಸೆ.1ರಂದು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಜ್ಪೆ ಪೊಲೀಸ್‌ನಿರೀಕ್ಷಕ ಪ್ರಕಾಶ್ ಅವರ ನೇತೃತ್ವದ ಪೊಲೀಸರು, ಗುಮಾನಿಯ ಮೇಲೆ ತಾರಿಕಂಬ್ಳ ನಿವಾಸಿ ವಿನ್ಸೆಂಟ್ ಡಿ ಸೋಜಾನನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದರು. ವಿಚಾರಣೆಯ ವೇಳೆ ಕಳವು ಗೈದಿರುವುದನ್ನು ಒಪ್ಪಿಕೊಂಡಿದ್ದು, ಕಳವು ಗೈದಿರುವ ಆಭರಣಗಳನ್ನು ಆರೋಪಿಯ ವಶದಿಂದ ಪೊಲೀಸರು ಪಡೆದುಕೊಂಡಿದ್ದಾರೆ.