ಬಹದ್ದೂರ್, ಭರ್ಜರಿ ಮೊದಲಾದ ಯಶಸ್ವಿ ಸಿನಿಮಾಗಳನ್ನು ನೀಡಿದ ಖ್ಯಾತಿ ಚೇತನ್ ಕುಮಾರ್ ಅವರಿಗೆ ಇದೆ. ಈಗ ಅವರು ಬರ್ಮ ಹೆಸರಿನ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ರಕ್ಷ್ ರಾಮ್ ಹೀರೋ. ಈ ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆದಿದೆ. ಹಲವು ಸೆಲೆಬ್ರಿಟಿಗಳು ಬಂದು ಚಿತ್ರತಂಡಕ್ಕೆ ಶುಭಕೋರಿದರು. ರಕ್ಷ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಬರ್ಮ ಸಿನಿಮಾದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ರಾಘವೇಂದ್ರ ರಾಜ್‌ಕುಮಾರ್ ಅವರು ಕ್ಯಾಮೆರಾಗೆ ಚಾಲನೆ ನೀಡಿದರು. ಮೊದಲ ದೃಶ್ಯಕ್ಕೆ ಖ್ಯಾತ ನಟ ಧ್ರುವ ಸರ್ಜಾ ಅವರು ಆಕ್ಷನ್ ಕಟ್ ಹೇಳಿದರು. ಇನ್ನು, ನಿರ್ದೇಶಕ ಎ.ಪಿ. ಅರ್ಜುನ್, ನಿರ್ಮಾಪಕ ಕೆ.ಪಿ. ಶ್ರೀಕಾಂತ್, ನಟ ಧೀರನ್ ರಾಮ್‌ಕುಮಾರ್ ಸೇರಿ ಅನೇಕರು ಈ ಮುಹೂರ್ತ ಸಮಾರಂಭದಲ್ಲಿ ಸಾಕ್ಷಿ ಆದರು. ಎಲ್ಲರೂ ಸಿನಿಮಾ ತಂಡಕ್ಕೆ ಶುಭ ಹಾರೈಸಿದ್ದಾರೆ.
ಬರ್ಮ ಚೇತನ್ ಕುಮಾರ್ ನಿರ್ದೇಶನದ ಐದನೇ ಸಿನಿಮಾ. ಬರ್ಮ ಅನ್ನೋದಕ್ಕೆ ಹಲವು ಅರ್ಥ ಇದೆ. ಬ್ರಹ್ಮ ವಾಸಿಸುವ ಜಾಗಕ್ಕೆ ಬರ್ಮ ಎನ್ನುತ್ತಾರೆ. ಇದು ದೇಶದ ಹೆಸರು ಕೂಡ ಹೌದು. ಕಥೆಗೆ ಪೂರಕ ಆಗಿರುವುದರಿಂದ ಈ ಹೆಸರು ಇಟ್ಟಿದ್ದೇವೆ. ರಕ್ಷ್ ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದಾರೆ. ಅವರೇ ಈ ಚಿತ್ರದ ನಿರ್ಮಾಪಕರು. ಕನ್ನಡ ಸೇರಿ ಐದು ಭಾಷೆಗಳಲ್ಲಿ ಸಿನಿಮಾ ಮೂಡಿ ಬರಲಿದೆ ಎಂದು ಚೇತನ್ ಕುಮಾರ್ ಮಾಹಿತಿ ನೀಡಿದರು.
ರಕ್ಷ್ ಸಿನಿಮಾ ಬಗ್ಗೆ ಮಾಹಿತಿ ನೀಡಿದರು. ಪುಟ್ಟಗೌರಿ ಮದುವೆಯಿಂದ ಹಿಡಿದು ಗಟ್ಟಿಮೇಳ ಧಾರಾವಾಹಿಯವರೆಗೆ ಸುಮಾರು ಮೂರು ಸಾವಿರ ಎಪಿಸೋಡ್‌ಗಳಲ್ಲಿ ಅಭಿನಯಿಸಿದ್ದೇನೆ. ಕನ್ನಡಿಗರು ತೋರಿಸಿದ ಪ್ರೀತಿಗೆ ನಾನು ಚಿರಋಣಿ ಎಂದರು ರಕ್ಷ್. ಬಹಳ ಹಿಂದೆಯೇ ಚೇತನ್ ಬಳಿ ಸಿನಿಮಾ ಮಾಡುವಂತೆ ರಕ್ಷ್ ಕೇಳಿದ್ದರು. ಈಗ ಅದಕ್ಕೆ ಸಮಯ ಕೂಡಿ ಬಂದಿದೆ.