ನವದೆಹಲಿ: ನೇಪಾಳದ ತನಾಹುನ್ ಜಿಲ್ಲೆಯ ಮಾರ್ಸ್ಯಾಂಗ್ಡಿ ನದಿಗೆ ಭಾರತೀಯ ಪ್ರಯಾಣಿಕರ ಬಸ್ ಉರುಳಿದ ಪರಿಣಾಮ ೧೪ ಜನರು ಸಾವನ್ನಪ್ಪಿದ್ದಾರೆ ಮತ್ತು ೧೬ ಜನರು ಗಾಯಗೊಂಡಿದ್ದಾರೆ. ೪೦ ಭಾರತೀಯರನ್ನು ಹೊತ್ತ ಬಸ್ ಪೊಖಾರಾದಿಂದ ಕಠ್ಮಂಡುವಿಗೆ ತೆರಳುತ್ತಿತ್ತು.
ಉತ್ತರ ಪ್ರದೇಶದ ಎಫ್ಟಿ ೭೬೨೩ ನಂಬರ್ ಪ್ಲೇಟ್ ಹೊಂದಿದ್ದ ಬಸ್ ನದಿಗೆ ಉರುಳಿ ಬಿದ್ದಿದೆ ಎಂದು ತನಾಹುನ್ ಜಿಲ್ಲೆಯ ಡಿಎಸ್ಪಿ ದೀಪ್ಕುಮಾರ್ ರಾಯ ತಿಳಿಸಿದ್ದಾರೆ. ಭಾರತೀಯ ಪ್ರಯಾಣಿಕರು ಪೋಖಾರಾದ ಮಜೇರಿ ರೆಸಾರ್ಟ್ನಲ್ಲಿ ತಂಗಿದ್ದರು. ಬಸ್ ಇಂದು ಶುಕ್ರವಾರ ಬೆಳಿಗ್ಗೆ ಪೋಖಾರಾದಿಂದ ಕಠ್ಮಂಡುವಿಗೆ ಹೊರಟಿತು.
ನೇಪಾಳ ವಿಪತ್ತು ನಿರ್ವಹಣಾ ತರಬೇತಿ ಶಾಲೆಯ ಹಿರಿಯ ಸೂಪರಿಟೆಂಡೆಂಟ್ ಆಫ್ ಪೊಲೀಸ್ ಮಾಧವ್ ಪೌದೆಲ್ ನೇತೃತ್ವದಲ್ಲಿ ೪೫ ಜನರಿರುವ ಸಶಸ್ತ್ರ ಪೊಲೀಸ್ ಪಡೆಯ ತಂಡ ಘಟನಾ ಸ್ಥಳಕ್ಕೆ ತೆರಳಿದ್ದು ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಈ ಬಸ್ ಉತ್ತರ ಪ್ರದೇಶ ಮೂಲದ್ದಾಗಿದ್ದು, ಪೊಖರದಿಂದ ಕಠ್ಮಂಡುವಿಗೆ ಹೋಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಯುಪಿ ಎಫ್‌ಟಿ ೭೬೨೩ ಸಂಖ್ಯೆಯನ್ನು ಹೊಂದಿದ್ದ ಬಸ್ ನದಿಗೆ ಬಿದ್ದಿದ್ದು, ಈಗ ನದಿ ತೀರದಲ್ಲಿದೆ ಎಂದು ತನಹಂ ಡಿಎಸ್‌ಪಿ ದೀಪ್ಕುಮಾರ್ ರಾಯ ಹೇಳಿದ್ದಾರೆ.
ಉತ್ತರ ಪ್ರದೇಶ ಪರಿಹಾರ ಕಮೀಷನರ್ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಬಸ್‌ನಲ್ಲಿ ರಾಜ್ಯದವರು ಯಾರಾದರು ಇದ್ದಾರೆಯೇ ಎಂಬುದನ್ನು ತಿಳಿಯುವುದಕ್ಕೆ ಅಲ್ಲಿನ ಆಡಳಿತವನ್ನು ಸಂಪರ್ಕಿಸಲಾಗುತ್ತಿದೆ ಎಂದು ಹೇಳಿದ್ದಾರೆ.