ವಿಜಯನಗರ: ಬಸ್ ನ ಟಯರ್ ಸ್ಫೋಟಗೊಂಡ ಪರಿಣಾಮ ಖಾಸಗಿ ಬಸ್ ಬೆಂಕಿಗೆ ಆಹುತಿಯಾಗಿರುವ ಘಟನೆ ಕೂಡ್ಲಿಗಿ ತಾಲೂಕಿನ ಕಾನಾಹೊಸಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಇಂದು ನಸುಕಿನ ಜಾವ ನಡೆದಿದ್ದು, 60 ಮಂದಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರಿನಿಂದ ಹೊಸಪೇಟೆ ಮಾರ್ಗವಾಗಿ ರಾಯಚೂರು ಜಿಲ್ಲೆಯ ಮಸ್ಕಿ, ಹಟ್ಟಿಗೆ ತೆರಳುತ್ತಿದ್ದಾಗ ಟಯರ್ ಸ್ಫೋಟಗೊಂಡ ಬೆಂಕಿ ಹತ್ತಿಕೊಂಡಿದೆ.
ಬೆಂಕಿ ನಂದಿಸುವಲ್ಲಿ ಸಿಬ್ಬಂದಿ ಹಾಗೂ ಪ್ರಯಾಣಿಕರು ನಡೆಸಿದ ಪ್ರಯತ್ನ ವಿಫಲವಾಗಿದ್ದು, ಕೆನ್ನಾಲಿಗೆಗೆ ವಾಹನ ಸುಟ್ಟು ಕರಕಲಾಗಿದೆ.
ಬೆಳಗಿನ ಜಾವ 3:30ರ ಸುಮಾರಿಗೆ ಟಯರ್ ಸ್ಫೋಟಗೊಂಡಿದೆ. ಬಸ್ ನಲ್ಲಿ ಎಮರ್ಜೆನ್ಸಿ ಫೈಯರ್ ಎಕ್ಸಿಸ್ಟೆನ್ಸ್ ಇಲ್ಲದೇ ಇರುವುದರಿಂದ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಬೆಂಕಿಯ ರುದ್ರನರ್ತನಕ್ಕೆ ಪ್ರಯಾಣಿಕರ ಕೆಲವು ವಸ್ತುಗಳ ಸುಟ್ಟು ಕರಕಲಾಗಿವೆ. 112ಕ್ಕೆ ಫೋನ್ ಕರೆ ಮಾಡಿದ್ರೆ ದೆಹಲಿಗೆ ಸಂಪರ್ಕ ಕಲ್ಪಿಸುತ್ತದೆ. ಹತ್ತಿರದ ಠಾಣೆಗೆ ಸಂಪರ್ಕ ಸಿಗಲಿಲ್ಲ.
ಒಂದು ಗಂಟೆಗೂ ಮೊದಲು ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದರೆ ಬಸ್ ಗೆ ಹೆಚ್ಚು ಹಾನಿಯಾಗುತ್ತಿರಲ್ಲಿಲ್ಲ ಎಂದು ಹೈವೇ ಪೊಲೀಸರು, ಅಗ್ನಿಶಾಮಕ ಇಲಾಖೆ, ಬಸ್ ಮಾಲೀಕರ ವಿರುದ್ಧ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದರು.
ಕೂಡ್ಲಿಗಿ ತಾಲೂಕಿನ ಖಾನಾಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.