ಚಿಕ್ಕಮಗಳೂರು: ಚಾಲಕನ ನಿಯಂತ್ರಣ ಕಳೆದುಕೊಂಡ ಖಾಸಗಿ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ಹಲವರಿಗೆ ಗಾಯವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದ ಬಿಳಗುಳ ಬಳಿ ನಡೆದಿದೆ. ಕಾವೇರಿ ಹೆಸರಿನ ಬಸ್ ಮುಂಭಾಗ ಜಖಂಗೊಂಡಿದೆ.
ಗಾಯಾಳುಗಳನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಪ್ರತಿದಿನ ಬೆಂಗಳೂರು ಮತ್ತು ಮೂಡಿಗೆರೆ ಕೊಟ್ಟಿಗೆಹಾರ ನಡುವೆ ಸಂಚರಿಸುವ ಬಸ್ ಇಂದು ಮುಂಜಾನೆ ಬೆಂಗಳೂರಿನಿಂದ ಹಾಸನ, ಚಿಕ್ಕಮಗಳೂರು ಮಾರ್ಗವಾಗಿ ಮೂಡಿಗೆರೆ ಕಡೆಗೆ ಬರುತ್ತಿದ್ದಂತೆ ಅವಘಡ ಸಂಭವಿಸಿದೆ. ಮಂಜು ಕವಿದ ವಾತಾವರಣ ಅಥವಾ ಚಾಲಕ ನಿದ್ರೆಯ ಮಂಪರಿನಿಂದ ಬಸ್ ನಿಯಂತ್ರಣ ತಪ್ಪಿ ಘಟನೆ ನಡೆದಿರಬಹುದು ಎನ್ನಲಾಗಿದೆ. ಸ್ಥಳಕ್ಕೆ ಧರ್ಮಸ್ಥಳ ಶೌರ್ಯ ವಿಪತ್ತು ತಂಡದ ಮೂಡಿಗೆರೆ ಘಟಕದ ಸದಸ್ಯರು ಮತ್ತು ಮೂಡಿಗೆರೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.