ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿಯಾಗಿ ಗಾಯಗೊಂಡಿದ್ದವರ ಆರೋಗ್ಯವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಚಾರಿಸಿ, ಎಲ್ಲರಿಗೂ ಧೈರ್ಯ ತುಂಬಿದ್ದಾರೆ. ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ಕೂಡಾ ನೀಡಿದ್ದಾರೆ. ಅಪಘಾತವಾದ ವಿಷಯ ತಿಳಿದ ಕೂಡಲೇ ಸಚಿವೆ ಜಿಲ್ಲಾಸ್ಪತ್ರೆಗೆ ತೆರಳಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿಯಾದ ಪರಿಣಾಮ ನಿರ್ವಾಹಕಿ, ಚಾಲಕ ಮತ್ತು ಪ್ರಯಾಣಿಕರಿಗೆ ಗಾಯಗಳಾಗಿರುವ ಘಟನೆ ಇಂದು ಬೆಳಗಾವಿ ತಾಲೂಕಿನ ಹಲಗಾ ಬಳಿ, ಸುವರ್ಣವಿಧಾನಸೌಧ ಮುಂಭಾಗದಲ್ಲಿ ನಡೆದಿದೆ. ಸಾರಿಗೆ ಸಂಸ್ಥೆಯ ನಗರ ಘಟಕಕ್ಕೆ ಸೇರಿದ ಬಸ್ ಇದಾಗಿದ್ದು, ನಗರ ಬಸ್ ನಿಲ್ದಾಣದಿಂದ ಕೆ.ಕೆ.ಕೊಪ್ಪಕ್ಕೆ ಹೊರಟಿತ್ತು. ಮಾರ್ಗಮಧ್ಯೆ ಬೆಳಗ್ಗೆ ೮.೩೦ರ ಸುಮಾರಿಗೆ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ತಗ್ಗಿನಲ್ಲಿ ಪಲ್ಟಿಯಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಶಗಮನಟ್ಟಿ ಗ್ರಾಮದ ವಿದ್ಯಾರ್ಥಿನಿ ಸಹನಾ ಹನುಮಂತ ಚೌಗಲೆ, ಬಸ್ ನಿರ್ವಾಹಕಿ ಶೋಭಾ ಗಾಣಗಿ ಅವರಿಗೆ ಗಂಭೀರ ಗಾಯಗಳಾಗಿದ್ದು, ಚಾಲಕ ಕೆ ಕೆ ಕೊಪ್ಪ ಗ್ರಾಮದ ರಾಯಪ್ಪ ಸಣ್ಣಪ್ಪ ಬಡಸ್, ಕರವಿನಕೊಪ್ಪ ಗ್ರಾಮದ ಗಂಗವ್ವ ಚಂದ್ರಪ್ಪ ಹಂಚಿನಮನಿ, ರಾಜಶ್ರೀ ಸಂತೋಷ ದಾಮನೇಕರ್ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಬಸ್‌ನಲ್ಲಿ ೬ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಸ್ಥಳಕ್ಕೆ ಹಿರೇಬಾಗೇವಾಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.