ಮೈಸೂರು: ವ್ಯಾಪಾರದಲ್ಲಿ ನೀಡಿದ್ದ ಸಾಲದ ಹಣ ವಸೂಲಿ ಮಾಡಲು ಉದ್ಯಮಿಯೊಬ್ಬರನ್ನು ಹಾಡಹಗಲೇ ಕಿಡ್ನಾಪ್ ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದ್ದು, ಘಟನೆ ನಡೆದ ಕೆಲವೇ ಗಂಟೆಗಳಲ್ಲೇ ಪೊಲೀಸರು ಅಪಹರಣಕಾರರ ಹೆಡೆಮುರಿ ಕಟ್ಟಿದ್ದಾರೆ.
ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳದಕೇರಿಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ಉದ್ಯಮಿ ಪ್ರಕಾಶ್(೩೫) ಎಂಬುವರನ್ನು ಅಪಹರಿಸಲಾಗಿತ್ತು. ವಿಷಯ ತಿಳಿದು ತಕ್ಷಣವೇ ಕಾರ್ಯಪ್ರವೃತ್ತರಾದ ಲಷ್ಕರ್ ಠಾಣಾ ಪೊಲೀಸರು ಅಪಹರಣಕಾರರ ಕಪಿಮುಷ್ಠಿಯಲ್ಲಿದ್ದ ಉದ್ಯಮಿಯನ್ನು ರಕ್ಷಿಸಿದ್ದು, ರಾಜಾಸ್ಥಾನ್ ಮೂಲದ ದುಗ್ಗರ್ ಸಿಂಗ್, ಬದ್ದಾರಾಮ್ ಸೇರಿದಂತೆ ಐದು ಮಂದಿಯನ್ನು ಬಂಧಿಸಿದ್ದಾರೆ.
ಹಳ್ಳದಕೇರಿಯಲ್ಲಿ ಲಲಿತಾ ಕಿಚನ್ ಸಪ್ಲೈಯರ್ಸ್ ಹೆಸರಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಪ್ರಕಾಶ್ ಕೆಲವು ದಿನಗಳ ಹಿಂದೆ ದುಗ್ಗರ್ ಸಿಂಗ್‌ನಿಂದ ತಮಿಳುನಾಡಿನ ವ್ಯಾಪಾರಿಯೊಬ್ಬರಿಗೆ ೫.೬ ಲಕ್ಷ ಮೌಲ್ಯದ ಗುಟ್ಕಾ ಕೊಡಿಸಿದ್ದರು. ತಮಿಳುನಾಡಿನ ವ್ಯಾಪಾರಿ ಹಣ ಹಿಂದಿರುಗಿಸುವಲ್ಲಿ ವಿಳಂಬ ಮಾಡಿದ್ದರು. ಗುಟ್ಕಾ ಹಣಕ್ಕಾಗಿ ದುಗ್ಗರ್ ಸಿಂಗ್ ಒತ್ತಾಯ ಮಾಡುತ್ತಿದ್ದರು. ಇದೇ ವಿಚಾರದಲ್ಲಿ ಇಬ್ಬರ ನಡುವೆ ವೈಷಮ್ಯ ಬೆಳೆದಿತ್ತು. ಜೂ.೨೬ರಂದು ಪ್ರಕಾಶ್ ತಮ್ಮ ಅಂಗಡಿಯಲ್ಲಿ ಕುಳಿತಿದ್ದ ವೇಳೆ ದುಗ್ಗರ್ ಸಿಂಗ್, ಬದ್ದಾರಾಮ್ ಸೇರಿದಂತೆ ೫ ಮಂದಿ ದಾಳಿ ಮಾಡಿ ಪ್ರಕಾಶ್ ಅವರನ್ನು ಬಲವಂತವಾಗಿ ಕಾರಿನಲ್ಲಿ ಅಪಹರಿಸಿದ್ದಾರೆ. ಪಕ್ಕದ ಅಂಗಡಿಯವರು ಘಟನೆ ಕಂಡು ಲಷ್ಕರ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅಲರ್ಟ್ ಆದ ಲಷ್ಕರ್ ಠಾಣಾ ಪೊಲೀಸರು ಉದ್ಯಮಿ ಪ್ರಕಾಶ್‌ರ ರಕ್ಷಣೆಗೆ ಮುಂದಾಗಿದ್ದಾರೆ.
ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಡಿಸಿಪಿ ಮುತ್ತುರಾಜ್ ಹಾಗೂ ಜಾಹ್ನವಿ ಮಾರ್ಗದರ್ಶನದಲ್ಲಿ ಎಸಿಪಿ ಶಾಂತಮಲ್ಲಪ್ಪ ಉಸ್ತುವಾರಿಯಲ್ಲಿ ಲಷ್ಕರ್ ಠಾಣೆ ಇನ್ಸ್ಪೆಕ್ಟರ್ ಬಿ.ಬಿ.ಸಂತೋಷ್ ನೇತೃತ್ವದಲ್ಲಿ ಎಸ್ಸೈ ಅನಿಲ್, ಸಿಬ್ಬಂದಿಗಳಾದ ಚೇತನ್, ಚಿನ್ನಪ್ಪ, ಮಂಜು, ಕಿರಣ್, ಮಹದೇವಸ್ವಾಮಿ, ಪ್ರದೀಪ್, ರಾಥೋಡ್, ಬಾಬು, ಪ್ರಕಾಶ್ ಅವರನ್ನೊಳಗೊಂಡ ತಂಡ ರಚನೆಯಾಗಿ ಅಪಹರಣಕಾರರ ಜಾಡು ಪತ್ತೆಹಚ್ಚಲು ಮುಂದಾಗಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಇನ್ಸ್‌ಪೆಕ್ಟರ್ ಸಂತೋಷ್ ತಂಡ ಕಿಡ್ನಾಪರ್ಸ್ ಜಾಡು ಪತ್ತೆ ಹಚ್ಚಿದೆ. ಆನೇಕಲ್ ತಾಲೂಕಿನ ಜಿಗಣಿಯ ಕಟ್ಟಡವೊಂದರಲ್ಲಿ ಪ್ರಕಾಶ್ ಅವರನ್ನು ಕೂಡಿ ಹಾಕಿರುವ ಮಾಹಿತಿ ಕಲೆ ಹಾಕಿದ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಪ್ರತಿರೋಧಿಸಿದ ಐವರು ಅಪಹರಣಕಾರರನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.