ಮದ್ದೂರು: ತಾಲೂಕಿನ ಆತಗೂರು ಹೋಬಳಿಯ 17 ಕೆರೆಗಳಿಗೆ ಏತ ನೀರಾವರಿ ಮೂಲಕ ನೀರು ತುಂಬಿಸಿ, ಜನ ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ವಹಿಸಲಾಗುತ್ತಿದೆ ಎಂದು ಶಾಸಕ ಕೆ.ಎಂ. ಉದಯ್ ಹೇಳಿದರು.
ತಾಲೂಕಿನ ಹೆಬ್ಬೆರಳು ಗ್ರಾಮದಲ್ಲಿ ಶುಕ್ರವಾರ ಏತ ನೀರಾವರಿ ಮೂಲಕ ಕೆರೆಗಳಿಗೆ ಪ್ರಾಯೋಗಿಕವಾಗಿ ನೀರು ತುಂಬಿಸುವ ಯೋಜನೆಯ ಪ್ರಗತಿಯನ್ನು ಪರಿಶೀಲಿಸಿ, ನಂತರ ಅವರು ಮಾತನಾಡಿದರು.
ಈ ಭಾಗದ ಏತ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಹಲವು ಸಮಸ್ಯೆಗಳಿದ್ದವು. ಕಳೆದೆರಡು ತಿಂಗಳಿಂದ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಏತಾ ನೀರಾವರಿ ಯೋಜನೆಗಳಿಗೆ ಪುನಶ್ಚೇತನ ನೀಡಿ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಿ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಪ್ರಾಯೋಗಿಕವಾಗಿ ಏತ ನೀರಾವರಿಗಳ ಮೂಲಕ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಉಪಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರಾದ ಡಿ.ಕೆ. ಶಿವಕುಮಾರ್ ಅವರನ್ನು ಕರೆಸಿ ಅಧಿಕೃತವಾಗಿ ಈ ಯೋಜನೆಗೆ ಚಾಲನೇ ನೀಡಲಾಗುವುದು ಎಂದು ತಿಳಿಸಿದರು.

ಏತ ನೀರಾವರಿಯ ಮೂಲಕ ಆತಗೂರು ಹೋಬಳಿಯ 17 ಕೆರೆಗಳಿಗೆ, ಕುಣಿಗಲ್ ತಾಲೂಕಿನ 3 ಕೆರೆಗಳಿಗೆ, ಚನ್ನಪಟ್ಟಣ ತಾಲೂಕಿನ ಎರಡು ಕೆರೆಗಳಿಗೂ ಕೂಡ ನೀರು ತುಂಬಿಸಬಹುದಾಗಿದ್ದು, ಬೇಸಿಗೆಗೆ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗದಂತೆ ಮುಂಜಾಗ್ರತೆ ವಹಿಸಲಾಗುತ್ತಿದೆ ಎಂದು ಹೇಳಿದರು.
ಕೆರೆಗಳಿಗೆ ನೀರು ತುಂಬಿಸುವುದರಿಂದ ಈ ಭಾಗದಲ್ಲಿ ಅಂತರ್ಜಲದ ಮಟ್ಟ ಹೆಚ್ಚುವ ಜೊತೆಗೆ, ಕೆರೆ, ಕಟ್ಟೆ, ಬಾವಿ ಹಾಗೂ ಬೋರ್ವೆಲ್ ಗಳಿಗೆ ಅನುಕೂಲವಾಗಲಿದೆ ಎಂದರು.
ಮಂಡ್ಯ ಜಿಲ್ಲೆ ಈಗಾಗಲೇ ಬರಗಾಲಕ್ಕೆ ತುತ್ತಾಗಿದೆ. ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ರಾಸುಗಳಿಗೆ ಮೇವಿಗೆ ತೊಂದರೆಯಾಗದಂತೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದೇನೆ. ಬರವನ್ನು ಸಮರ್ಥವಾಗಿ ನಿಭಾಯಿಸಲು ತಾಲೂಕು ಆಡಳಿತ ಸನ್ನದಾಗಿದೆ. ಮನೆಗೆ ನೀರು ತುಂಬಿಸುವುದರಿಂದ ಕೆರೆಗಳ ಅಂತರ್ಜಲ ಹೆಚ್ಚುವುದರ ಜೊತೆಗೆ ಮುಂದಿನ ದಿನಗಳಲ್ಲಿ ರೈತರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಭರವಸೆ ವ್ಯಕ್ತಪಡಿಸಿದರು.
ತಾ.ಪಂ. ಮಾಜಿ ಸದಸ್ಯ ಕೆ.ಆರ್. ಮಹೇಶ್, ಮುಖಂಡರಾದ ಗೊರವನಹಳ್ಳಿ ಮಧು, ಆರ್.ಸಿ.ಎಸ್. ಶಿವು, ಯತೀಶ್, ನೀರಾವರಿಯ ಇಲಾಖೆಯ ಇಂಜಿನಿಯರ್ ಗಳಾದ ನಂಜುಂಡೇಗೌಡ, ಎಚ್.ಸಿ. ನಾಗರಾಜು, ವೆಂಕಟೇಶ್ ಸೇರಿದಂತೆ ಇತರರಿದ್ದರು.