ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಪ್ರತಿಭಾ ಪುರಸ್ಕಾರ ಮಾಡುವುದರಿಂದ ವಿದ್ಯಾರ್ಥಿಗಳ ಸಾಧನೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಕೆ.ಆರ್.ನಗರ ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ತಾಲೂಕು ನಾಯಕರ ಸಂಘ ಮತ್ತು ನಾಯಕ ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಾಧಕರನ್ನು ಸನ್ಮಾನಿಸುವುದರಿಂದ ಇತರರಿಗೆ ಅದು ಸ್ಪೂರ್ತಿದಾಯಕವಾಗಲಿದ್ದು ಇಂತಹ ಉತ್ತಮ ಕೆಲಸ ಮಾಡುವ ಸಂಘ ಸಂಸ್ಥೆಗಳ ಜತೆಗೆ ಸಾರ್ವಜನಿಕರು ಸಹಾಯ ಹಸ್ತ ಚಾಚಿ ಬೆನ್ನೆಲುಬಾಗಿ ನಿಲ್ಲಬೇಕೆಂದು ಸಲಹೆ ನೀಡಿದರು.
ಶಿಕ್ಷಕರು ಮತ್ತು ಪೋಷಕರು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಅವರಿಗೆ ಮಾರ್ಗದರ್ಶನ ಮಾಡಬೇಕೆಂದ ಶಾಸಕರು ಇಲ್ಲಿನ ವಾಲ್ಮೀಕಿ ಸಮುದಾಯ ಭವನದ ಆವರಣದಲ್ಲಿ ದೇವಾಲಯ ನಿರ್ಮಾಣ ಮಾಡಲು ಶಾಸಕರ ನಿಧಿಯಿಂದ ೫ ಲಕ್ಷ ರೂ ಅನುದಾನ ನೀಡಲಾಗಿದ್ದು ಶೀಘ್ರದಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಸಾಲಿಗ್ರಾಮ ತಾಲೂಕು ಕೇಂದ್ರದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ನಿವೇಶನ ನೀಡುವುದರ ಜತೆಗೆ ಸರ್ಕಾರದಿಂದ ಅಗತ್ಯ ಅನುದಾನ ಕೊಡಿಸುವ ಭರವಸೆ ನೀಡಿದ ಡಿ.ರವಿಶಂಕರ್ ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ನಾನು ಕ್ಷೇತ್ರದ ೧೮ ಗ್ರಾಮಗಳಿಗೆ ಸಮುದಾಯ ಭವನ ನಿರ್ಮಾಣ ಮಾಡಿಸಲು ಅನುದಾನ ಕೊಡಿಸಿದ್ದೆ ಎಂದು ನುಡಿದರು.
ಮುಂದಿನ ತಿಂಗಳು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆಯುವ ವಾಲ್ಮೀಕಿ ಜಾತ್ರೆಗೆ ತೆರಳುವ ನಾಯಕ ಸಮಾಜದ ಬಾಂಧವರಿಗೆ ಅಗತ್ಯವಿರುವ ಅನುಕೂಲಗಳನ್ನು ಒದಗಿಸುವುದರ ಜತೆಗೆ ನಾನು ಸಹ ಜಾತ್ರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆಯುತ್ತೇನೆಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ನಿವೃತ್ತ ನೌಕರರಿಗೆ ಸನ್ಮಾನ ಮಾಡುವುದರ ಜತೆಗೆ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತ್ತಲ್ಲದೆ ನಾಯಕ ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಶಾಸಕ ಡಿ.ರವಿಶಂಕರ್ ಅವರನ್ನು ಸನ್ಮಾನಿಸಲಾಯಿತು.
ಕೆ.ಆರ್.ನಗರ ತಾಲೂಕು ನಾಯಕ ಸಮಾಜದ ಅಧ್ಯಕ್ಷ ನರಸಿಂಹನಾಯಕ, ಸಾಲಿಗ್ರಾಮ ತಾಲೂಕು ಅಧ್ಯಕ್ಷ ಮಾದನಾಯಕ, ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಜಿ.ಕೆ.ಸಿದ್ದೇಶ್ವರಪ್ರಸಾದ್, ಸಾಲಿಗ್ರಾಮ ನೌಕರರ ಸಂಘದ ಅಧ್ಯಕ್ಷ ರೋಹಿತ್‌ನಾಯಕ, ರಾಜ್ಯ ಕಾಂಗ್ರೆಸ್ ಎಸ್‌ಟಿ ಘಟಕದ ಉಪಾಧ್ಯಕ್ಷ ಕಲ್ಲಹಳ್ಳಿಶ್ರೀನಿವಾಸ್, ಟಿಎಪಿಸಿಎಂಎಸ್ ನಿರ್ದೇಶಕ ತೋಟಪ್ಪನಾಯಕ, ಹೊಸಅಗ್ರಹಾರ ಗ್ರಾ.ಪಂ. ಅಧ್ಯಕ್ಷೆ ಸೌಮ್ಯಶಿವಕುಮಾರ್, ತಂದ್ರೆ ಗ್ರಾ.ಪಂ. ಅಧ್ಯಕ್ಷೆ ರೇಣುಕಾವೆಂಕಟೇಶ್, ಶಿಕ್ಷಣ ಸಂಯೋಜಕ ದಾಸಪ್ಪ, ಸಮಾಜದ ಮುಖಂಡರಾದ ದೇವರಾಜು, ನಾಗರಾಜನಾಯಕ, ಮಹದೇವನಾಯಕ, ಪರಮೇಶ್, ಕೆ.ವಿ.ರಮೇಶ್, ಕೃಷ್ಣನಾಯಕ, ಸುರೇಶ್, ಚೌಡನಾಯಕ ಮತ್ತಿತರರು ಇದ್ದರು.