ವರದಿ: ಸತೀಶ್ ಆರಾಧ್ಯ
ಪಿರಿಯಾಪಟ್ಟಣ: ಧಾರ್ಮಿಕ ಆಚರಣೆಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕಿದೆ ಎಂದು ಬೆಟ್ಟದಪುರ ಕನ್ನಡ ಮಠದ ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಕೋಮಲಾಪುರ ಗ್ರಾಮದ ಶ್ರೀ ಚೌಡೇಶ್ವರಿ ಶ್ರೀ ರಾಮಲಿಂಗೇಶ್ವರ ದೇವಾಲಯ ಆವರಣದಲ್ಲಿ ನಡೆದ ಶ್ರೀ ಸತ್ಯನಾರಾಯಣ ಸ್ವಾಮಿ ವ್ರತಕಥೆ ಹಾಗೂ ಶ್ರೀ ವರದಶಂಕರ ವ್ರತಕಥೆಯ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು, ಪ್ರತಿನಿತ್ಯ ಭಗವಂತನ ಆರಾಧನೆ ಮತ್ತು ಪೂಜೆ ಮಾಡುವುದು ನಮಗೆ ಸಂಸ್ಕಾರ ಕಲಿಸುತ್ತದೆ, ಭಕ್ತರಿಗೆ ದೇವರ ಮಹಿಮೆ ಸಾರುವುದು ವಿಶೇಷ ಕಾರ್ಯಕ್ರಮವಾಗಿದ್ದು ಕಾವೇರಿ ನದಿ ಚಿಕ್ಕ ಜರಿಯಾಗಿ ಹುಟ್ಟಿ ಕನ್ನಡ ನಾಡಿಗೆ ಆಸರೆಯಾಗುವಂತೆ ಇಂದು ಕುಂಭಮೇಳದ ಸಂದರ್ಭ ಪ್ರಾರಂಭವಾದ ಈ ಧಾರ್ಮಿಕ ಕಾರ್ಯಕ್ರಮ ಮುಂದೆ ಪ್ರಸಿದ್ಧಿಯಾಗಿ ದೇವಾಲಯ ಅರ್ಚಕರಾದ ಗಣೇಶ್ ಬಸವರಾಜು ಅವರ ಧಾರ್ಮಿಕ ಕಾರ್ಯ ಮತ್ತಷ್ಟು ಹೆಚ್ಚುವಂತಾಗಲಿ ಎಂದು ಶುಭ ಕೋರಿದರು.
ಶ್ರೀರಾಮ ಪ್ರೌಢಶಾಲೆ ನಿವೃತ್ತ ಮುಖ್ಯ ಶಿಕ್ಷಕರಾದ ಎಂ.ಬಿ ಮಲ್ಲಾರಧ್ಯ ಅವರು ಮಾತನಾಡಿ ದೇವಾಲಯ ವತಿಯಿಂದ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮದಿಂದ ಗ್ರಾಮಕ್ಕೆ ಒಳಿತಾಗಿ ಕೆಟ್ಟ ಶಕ್ತಿಗಳು ದೂರವಾಗಿ ಗ್ರಾಮ ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದರು.

ಬೆಕ್ಕರೆ ಗ್ರಾಮದ ಜ್ಯೋತಿಷಿ ಕೆ.ಎಸ್ ಷಣ್ಮುಖಾರಾಧ್ಯ ಅವರು ಮಾತನಾಡಿ ಉತ್ತರಾಯಣ ಪುಣ್ಯ ಕಾಲದ ಸಂದರ್ಭ ಶ್ರೀ ರಾಮಲಿಂಗೇಶ್ವರ ಸನ್ನಿಧಿಯಲ್ಲಿ ಗಣೇಶ್ ಬಸವರಾಜ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಲಿ ಎಂದು ಶುಭ ಕೋರಿದರು.
ಪಿರಿಯಾಪಟ್ಟಣ ಆರಕ್ಷಕ ಠಾಣೆ ಇನ್ಸ್ಪೆಕ್ಟರ್ ಗೋವಿಂದರಾಜು ಅವರು ಮಾತನಾಡಿ ಆಧುನಿಕ ಯುಗದಲ್ಲಿ ಪೂರ್ವಜರ ಧಾರ್ಮಿಕ ಕಾರ್ಯಕ್ರಮಗಳ ಆಚರಣೆ ಶ್ಲಾಘನೀಯ ಇದರ ಜೊತೆ ನಮ್ಮ ಜನಪದ ಹಾಗೂ ಸಾಹಿತ್ಯ ಕಲೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆಯಾಗಬೇಕು ಎಂದರು.
ಕೋಮಲಾಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷೆ ಶಿವಮ್ಮ ಶಿವರಾಜು, ತಾಲೂಕು ಪಂಚಾಯತಿ ಮಾಜಿ ಸದಸ್ಯ ರಘುನಾಥ್ ಕಾರ್ಯಕ್ರಮ ಕುರಿತು ಮಾತನಾಡಿ ಶುಭ ಕೋರಿದರು, ವೇದಿಕೆ ಕಾರ್ಯಕ್ರಮ ಬಳಿಕ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.
ಈ ಸಂದರ್ಭ ದಿಂಡಗಾಡು ಮಠದ ಶ್ರೀ ಅಪ್ಪಾಜಿ ಸ್ವಾಮೀಜಿ, ಹರಳಹಳ್ಳಿ ಗುರುಮಠದ ಶ್ರೀ ಶ್ರೀಕಂಠಾರಾದ್ಯರು, ದೇವಾಲಯ ಪ್ರಧಾನ ಅರ್ಚಕರಾದ ಗಣೇಶ್ ಬಸವರಾಜ್, ಶ್ರೀಮತಿ ಮಹದೇವಮ್ಮ, ಶ್ರೀಮತಿ ಗೌರಮ್ಮ, ಗಣೇಶ್, ಶ್ರೀನಿವಾಸ್, ಹರೀಶ್, ಈರೇಗೌಡ, ರಾಜಶೆಟ್ಟಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು, ದೇವಾಲಯದ ಭಕ್ತರು, ಕೋಮಲಾಪುರ ಸೇರಿದಂತೆ ಸುತ್ತಮುತ್ತಲ ಗ್ರಾಮದ ಭಕ್ತರು ಇದ್ದರು.