ಮೈಸೂರು: ರೈತ ಕಲ್ಯಾಣ ಸಂಘದ ಸಂಸ್ಥಾಪಕ ಭೂಮಿಪುತ್ರ ಸಿ.ಚಂದನ್ ಗೌಡ ಅವರು ಈ ಸಾಲಿನ ಪ್ರಸಿದ್ಧ ಶ್ರೀ ಮಂತ್ರಾಲಯಂ ಪರಿಮಳ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದೇ ಮಾರ್ಚ್ ೧೭ರ ಭಾನುವಾರ ಸಂಜೆ ೪.೩೦ಕ್ಕೆ ಮಂತ್ರಾಲಯದಲ್ಲಿ ಶ್ರೀಮತ್ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಉಪಸ್ಥಿತಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಮನುಷ್ಯ ಸತ್ತರೆ ಮಣ್ಣಿಗೆ… ಮಣ್ಣು ಸತ್ತರೆ ಎಲ್ಲಿಗೆ..? ಮಣ್ಣಿಗೆ ಮರು ಜೀವ ಎಂಬ ಅಭಿಯಾನದಲ್ಲಿ ಸತತವಾಗಿ ಎರಡು ವರ್ಷಗಳಿಂದ ಮಣ್ಣಿನ ರಕ್ಷಣೆಯ ಸಂಕಲ್ಪದೊಂದಿಗೆ ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಾ, ರಾಸಾಯನಿಕ ಮುಕ್ತ ಕೃಷಿಗೆ ಪಣತೊಟ್ಟು, ಸಾಂಪ್ರದಾಯಿಕ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಅನ್ನದಾತರಲ್ಲಿ ಅರಿವು ಮೂಡಿಸುತ್ತಿರುವ ಚಂದನ್ ಗೌಡ ಅವರು, ರೈತರ ಜಮೀನುಗಳಿಗೆ ನೇರವಾಗಿ ತೆರಳಿ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಗಳಿಸಿ ಶ್ರೀಮಂತರ ಸಾಲಿನಲ್ಲಿ ರೈತರು ಕೂಡ ಮುಂಚೂಣಿ ಸ್ಥಾನಕ್ಕೆ ಬರಬೇಕು ಎನ್ನುವ ಮಹದಾಸೆಯ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ನಿರಂತರವಾಗಿ ಮಣ್ಣಿನ ಸೇವೆ ಮಾಡುತ್ತಿರುವ ಚಂದನ್ ಗೌಡರ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.