ಬೆಂಗಳೂರು: ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಸಚಿವ ಸಂಪುಟ ಸಭೆಯಲ್ಲಿ ರಾಜ್ಯದಲ್ಲಿ ಜಾತಿಗಣತಿ ಮರು ಸಮೀಕ್ಷೆ ನಡೆಸಲು ಒಪ್ಪಿಗೆ ನೀಡಲಾಯಿತು.
ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೆತ್ತಿಕೊಳ್ಳಲಾಗಿದೆ. ಹಿಂದೆ ನಡೆದ ಜಾತಿಗಣತಿ ವರದಿ ಕುರಿತಾಗಿ ಹಲವು ವಿವಾದಗಳು ಉಂಟಾಗಿದ್ದ ಹಿನ್ನೆಲೆಯಲ್ಲಿ, ಈ ಮರು ಸಮೀಕ್ಷೆ ಅತ್ಯಂತ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ. ಅದರಲ್ಲೂ ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿತ್ತು. ಈ ಹಿನ್ನೆಲೆ ಇಂದು ನಡೆದ ಸಚಿವ ಸಂಪುಟ ಸಭೆಯು ಜಾತಿಗಣತಿ ಮರು ಸಮೀಕ್ಷೆಗೆ ಅಧಿಕೃತ ಅಸ್ತು ನೀಡಿದೆ.