ಬೆಂಗಳೂರು: ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಇಂದು(ಗುರುವಾರ), ಗ್ರಾಮಸ್ಥರ ವಿರೋಧವಿದ್ದರೂ ಪರಮಾಣು ವಿದ್ಯುತ್ ಸ್ಥಾವರಕ್ಕೆ ಅನುಮೋದನೆ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಕೊಪ್ಪಳ, ವಿಜಯಪುರ, ರಾಯಚೂರು ಸೇರಿ ಕೆಲ ಜಿಲ್ಲೆಗಳಲ್ಲಿ ಸ್ಥಾವರ ಸ್ಥಾಪನೆಗೆ ಸಂಬಂಧಿಸಿದ ಪ್ರಾಥಮಿಕ ಅಧ್ಯಯನ ನಡೆಸಲು ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ (ಎನ್‌ಟಿಪಿಸಿ)ಗೆ ಅನುಮತಿ ನೀಡುವ ಬಗ್ಗೆ ಸಂಪುಟ ಚರ್ಚಿಸಲಿದೆ.
ಈ ವರ್ಷದ ಕೇಂದ್ರ ಬಜೆಟ್‌ನಲ್ಲಿ 2047ರೊಳಗೆ 100 ಗಿಗಾವ್ಯಾಟ್ ಪರಮಾಣು ವಿದ್ಯುತ್ ಉತ್ಪಾದನೆಯ ಗುರಿ ಇಡಲಾಗಿದೆ. ಪಳೆಯುಳಿಕೆ ಇಂಧನಗಳ ಮೇಲೆ ಅವಲಂಬನೆಯು ಕಡಿಮೆಯಾಗುವಂತೆ ಸರ್ಕಾರ ಉದ್ದೇಶಿಸಿದೆ.
ಇದೇ ಸಭೆಯಲ್ಲಿ, ಜೂನ್ 4 ರಂದು ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣದ ಬಗ್ಗೆ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿಕುನ್ಹಾ ಸಲ್ಲಿಸಿರುವ ವರದಿಯೂ ಚರ್ಚೆಗೆ ಬರಲಿದೆ. ದೇವನಹಳ್ಳಿ ಬಳಿ 1,777 ಎಕರೆ ಭೂಮಿ ಸ್ವಾಧೀನ ಕುರಿತ ಅಧಿಸೂಚನೆಯನ್ನು ಹಿಂತೆಗೆದುಕೊಳ್ಳುವ ನಿರ್ಧಾರ, ಹಾಗೂ ಆಂಧ್ರಪ್ರದೇಶದ ಕೈಗಾರಿಕಾ ನೀತಿಯ ಕುರಿತು ಚರ್ಚೆಗಳೂ ನಡೆಯುವ ಸಾಧ್ಯತೆಗಳಿವೆ.