ಗುಂಡ್ಲುಪೇಟೆ: ತಾಲೂಕಿನ ಬೊಮ್ಮಲಾಪುರ ಗ್ರಾಮದ ಹೊರ ವಲಯದ ತೋಟವೊಂದರಲ್ಲಿ ಚಿರತೆ ದಾಳಿಗೆ ಕರು ಬಲಿಯಾಗಿದೆ.
ಗ್ರಾಮದ ಕೆಂಡಗಣ್ಣಸ್ವಾಮಿ ಕರು ಕಳೆದುಕೊಂಡವರು. ಇವರು ತೋಟದಲ್ಲಿರುವ ಕೊಟ್ಟಿಗೆಯಲ್ಲಿ ಜಾನುವಾರುಗಳನ್ನು ಕಟ್ಟಿ ಹಾಕಿದ್ದರು. ಸೋಮವಾರ ರಾತ್ರಿ ಆಹಾರ ಅರಸಿ ಬಂದ ಚಿರತೆ ಕೊಟ್ಟಿಗೆ ಪ್ರವೇಶಿಸಿ ಕರುವನ್ನು ಕೊಂದು ತಿಂದಿದೆ. ಮಂಗಳವಾರ ಬೆಳಗ್ಗೆ ಹಾಲು ಕರೆಯಲೆಂದು ಹೋದಾಗ ಘಟನೆ ನಡೆದಿರುವುದು ತಿಳಿದಿದೆ.
ಈ ಭಾಗದಲ್ಲಿ ಈಚಿನ ದಿನಗಳಲ್ಲಿ ಚಿರತೆ ಓಡಾಡುವುದು ಹೆಜ್ಜೆ ಗುರುತಿನಿಂದ ತಿಳಿದಿತ್ತು. ಸೋಮವಾರ ರಾತ್ರಿ ಘಟನೆ ನಡೆದಿದ್ದು, ತೋಟದ ಮನೆಗಳಲ್ಲಿ ವಾಸಿಸುವ ಜನರು ಭೀತಿಗೊಂಡಿದ್ದಾರೆ. ರೈತನಿಗೆ ಸೂಕ್ತ ಪರಿಹಾರ ಕೊಡಬೇಕು. ಚಿರತೆ ಸೆರೆ ಹಿಡಿಯಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.