ಚಾಮರಾಜನಗರ: ತಾಲೂಕಿನ ಕಿಲಗೆರೆ ಗ್ರಾಮದಲ್ಲಿ ಚಿರತೆ ದಾಳಿಗೆ ಕರುವೊಂದು ಬಲಿಯಾಗಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ಗ್ರಾಮದ ಯುವ ರೈತ ಸ್ವಾಮಿ ಎಂಬುವವರ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕರುವನ್ನು ಚಿರತೆಯು ಎಳೆದೊಯ್ದು ಕೊಂದು ಹಾಕಿದ್ದು, ಇದರಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಗ್ರಾಮದ ಸಮೀಪವೇ ಚಿರತೆಯು ಬಂದಿರುವುದರಿಂದ ಜನರು ಸಂಜೆಯ ವೇಳೆ ಓಡಾಡಲು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಂಬಂಧಪಟ್ಟ ಅರಣ್ಯ ಇಲಾಖೆಯು ಬೋನ್ ಇಟ್ಟು ಚಿರತೆಯನ್ನು ಸೆರೆ ಹಿಡಿಯುವಂತೆ ಜನರು ಆಗ್ರಹಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ, ಇಲಾಖೆ ವತಿಯಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.