ಪುತ್ತೂರು : ಚಿರತೆಯೊಂದು ಕರುವಿನ ಮೇಲೆ ದಾಳಿ ನಡೆಸಿ ಕೊಂದಿರುವ ಘಟನೆ ಜಿಲ್ಲೆಯ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಕಣಿಯಾರುಮಲೆ ರಕ್ಷಿತಾರಣ್ಯದ ಅರ್ತಿಯಡ್ಕ ಎಂಬಲ್ಲಿ ನಡೆದಿದೆ. ಕರುವಿನ ದಾಳಿ ನಡೆಸಿದ ಬಳಿಕ ಚಿರತೆಯು ಕರುವಿನ ಕಳೇಬರವನ್ನು ಇಲ್ಲಿನ ರಬ್ಬರ್ ಮರದ ಮೇಲೆ ಬಿಟ್ಟು ಪರಾರಿಯಾಗಿದೆ.
ಇಂದು ಬೆಳಗ್ಗೆ ಇಲ್ಲಿನ ರಬ್ಬರ್ ತೋಟಕ್ಕೆ ರಬ್ಬರ್ ಟ್ಯಾಪಿಂಗ್‌ಗೆ ಕಾರ್ಮಿಕರು ತೆರಳಿದ್ದರು. ಈ ವೇಳೆ ತೋಟದಲ್ಲಿ ಚಿರತೆಯು ಭಾಗಶಃ ತಿಂದಿರುವ ಕರುವಿನ ಕಳೇಬರವನ್ನು ಕಂಡಿದ್ದಾರೆ. ಚಿರತೆಯು ಕರುವಿನ ಮೇಲೆ ದಾಳಿ ನಡೆಸಿದ ಬಳಿಕ ಕಳೇಬರವನ್ನು ಎಳೆದೊಯ್ದು ಮರದ ಮೇಲೆ ಇರಿಸಿತ್ತು. ಇದನ್ನು ಕಂಡು ಕಾರ್ಮಿಕರು ಬೆಚ್ಚಿಬಿದ್ದಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.