ಚಾಮರಾಜನಗರ: ಮಾದಕ ದ್ರವ್ಯಗಳ ಕುರಿತ ಜಾಗೃತಿ ಅಭಿಯಾನದ ಅಂಗವಾಗಿ ಆಯೋಜಿಸಲಾಗಿದ್ದ ಜಾಗೃತಿ ನಡಿಗೆ ಮತ್ತು ಓಟಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಅವರು ನಗರದಲ್ಲಿ ಇಂದು ಚಾಲನೆ ನೀಡಿದರು. ನಗರದ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಚಾಮರಾಜನಗರ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧನಾ ಆಸ್ಪತ್ರೆಯ ಸಹಯೋಗದಲ್ಲಿ ಮಾದಕ ದ್ರವ್ಯಗಳ ಸೇವನೆ ವಿರುದ್ಧ ಅರಿವು ಮೂಡಿಸುವ ಸಲುವಾಗಿ ಏರ್ಪಡಿಸಿದ್ದ ‘ಜಾಗೃತಿ ನಡಿಗೆ ಮತ್ತು ಓಟ’ ಅಭಿಯಾನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಹಸಿರು ನಿಶಾನೆ ತೋರಿದರು.
ಬಳಿಕ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಅವರು ಮಾದಕ ದ್ರವ್ಯಗಳು ಯುವಜನತೆಗೆ ಮಾರಕವಾಗಿ ಪರಿಣಮಿಸಿವೆ. ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಮಕ್ಕಳು, ಯುವಕರಿಗೆ ಜಾಗೃತಿ ಮೂಡಿಸಲು ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ನಾಗರಿಕರು ಮಾದಕ ವಸ್ತುಗಳ ದುಶ್ಚಟಕ್ಕೆ ಒಳಗಾಗದಂತೆ ತಡೆಯುವುದೇ ಅಭಿಯಾನದ ಉದ್ದೇಶವಾಗಿದೆ ಎಂದರು. ಶಾಲಾ-ಕಾಲೇಜುಗಳ ಬಳಿ ಮಾದಕ ವಸ್ತುಗಳ ಮಾರಾಟ ಅಪರಾಧವಾಗಿದೆ. ಮಾದಕ ವಸ್ತುಗಳನ್ನು ಸೇವಿಸುವಂತೆ ಯಾವುದೇ ವ್ಯಕ್ತಿ ನಿಮ್ಮನ್ನು ಪ್ರೇರೇಪಿಸಲು ಪ್ರಯತ್ನಿಸಬಹುದು. ಅಂತಹ ಪರಿಸ್ಥಿತಿ ಎದುರಾದರೆ 112 ಗೆ ಕರೆ ಮಾಡಿ ಮಾಹಿತಿ ನೀಡಿ. ಸಹಾಯಕ್ಕೆ ಪೊಲೀಸರು ಆಗಮಿಸಲಿದ್ದಾರೆ. ಸಾರ್ವಜನಿಕ ಸುರಕ್ಷತೆ ಪೊಲೀಸರ ಆದ್ಯತೆಯಾಗಿದೆ ಎಂದು ತಿಳಿಸಿದರು.
ಮಾದಕ ದ್ರವ್ಯಗಳ ಸೇವನೆಯಿಂದ ದೂರವಿರಲು ಚಿಂತನೆ ನಡೆಸಬೇಕು. ಮಾದಕ ದ್ರವ್ಯಗಳ ವಿರುದ್ಧ ಜಾಗೃತರಾಗುವ ಮೂಲಕ ಇಡೀ ಸಮಾಜಕ್ಕೆ ಸಂದೇಶ ತಲುಪಬೇಕು. ಉತ್ತಮ ಸಮಾಜ ನಿರ್ಮಾಣವಾಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಅವರು ತಿಳಿಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ಡಿವೈಎಸ್‍ಪಿ ಲಕ್ಷ್ಮಯ್ಯ, ವೈದ್ಯಕೀಯ ವಿಜ್ಞಾನಗಳ ಬೋಧನಾ ಆಸ್ಪತ್ರೆಯ ಡಾ. ಮಾರುತಿ, ಇತರರು ಇದ್ದರು.
ಜಾಗೃತಿ ನಡಿಗೆಯು ನಗರದ ಪ್ರಮುಖ ರಸ್ತೆಗಳಾದ ಭುವನೇಶ್ವರಿ ವೃತ್ತ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಸುಲ್ತಾನ್ ಷರೀಫ್ ವೃತ್ತ, ದೊಡ್ಡಂಗಡಿ ಬೀದಿ, ಸಂತೆಮರಹಳ್ಳಿ ವೃತ್ತ, ಡಿವಿಯೇಷನ್ ರಸ್ತೆಯ ಮೂಲಕ ಸಾಗಿ ಬಳಿಕ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಅಂತ್ಯಗೊಂಡಿತು. ಜಾಗೃತಿ ನಡಿಗೆಯಲ್ಲಿ ಪೊಲೀಸ್ ಅಧಿಕಾರಿಗಳು, ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.