ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್ ರದ್ದು ಮಾಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರೂ ಈವರೆಗೂ ಸ್ಪಂದಿಸಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್ ರದ್ದು ಮಾಡುವಂತೆ ಮುಖ್ಯಮಂತ್ರಿಯವರು ಪತ್ರ ಬರೆದಿದ್ದಾರೆ. ಎಸ್‌ಐಟಿ ಪತ್ರ ಬರೆದಿದೆ. ಈವರೆಗೂ ಕೇಂದ್ರ ಸರ್ಕಾರದಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ ಎಂದರು.
ಕೇಂದ್ರ ಸರ್ಕಾರವು ಕಾನೂನಿನ ಚೌಕಟ್ಟಿನಲ್ಲಿ ಸಹಾಯ ಮಾಡಬೇಕು. ಬರೀ ಟೀಕೆ ಮಾಡಿದರೆ ಅರ್ಥವಿಲ್ಲ. ಪ್ರಜ್ವಲ್ ರೇವಣ್ಣ ಅವರ ಮೇಲೆ ವಾರಂಟ್ ಜಾರಿ ಮಾಡಿರುವುದನ್ನು ತಿಳಿಸಲಾಗಿದೆ. ವಾರಂಟ್ ಜಾರಿಯಾದ ನಂತರ ಪಾಸ್‌ಪೋರ್ಟ್ ರದ್ದುಗೊಳಿಸುವುದು ಕೇಂದ್ರ ಸರ್ಕಾರದ ಕರ್ತವ್ಯ ಎಂದು ಹೇಳಿದರು.
ಉಪಮುಖ್ಯಮಂತ್ರಿಯವರದ್ದು ಎನ್ನಲಾದ ಆಡಿಯೋ ಕುರಿತು ಹೆಚ್.ಡಿ.ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರು ಪ್ರತಿಯೊಂದಕ್ಕೂ ಮಾತನಾಡುತ್ತಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ಎಸ್‌ಐಟಿ ಏನೆಲ್ಲ ಕೆಲಸ ಮಾಡಬೇಕೋ ಅದನ್ನು ಮಾಡುತ್ತಿದೆ ಎಂದ ಹೇಳಿದರು.