ಶಿವಮೊಗ್ಗ: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆಯಿದ್ದು, ಇದರ ಪರಿಣಾ ಮವಾಗಿ ಬಿಜೆಪಿ- ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಬಿಜೆಪಿ ನಗರ ಮಂಡಲ ವತಿಯಿಂದ ನಗರದ ಸೋಮಿನಕೊಪ್ಪ ರಸ್ತೆಯಲ್ಲಿರುವ ಶಾರದಮ್ಮ ಬಡಾವಣೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಗ್ಯಾರಂಟಿಗಳು ರಾಜ್ಯದ ಎಲ್ಲಾ ಜನರಿಗೆ ತಲುಪುವಲ್ಲಿ ವಿಫಲವಾಗಿವೆ. ಇದು ಮೂಗಿಗೆ ತುಪ್ಪ ಸವರುವಂತಹ ಕೆಲಸವಾಗಿದೆ. ರಾಜ್ಯದ ಪ್ರಜ್ಞಾವಂತ ಮತದಾರರು ಇದನ್ನು ಗಮನಿಸುತ್ತಿದ್ದಾರೆ. ಬಿಜೆಪಿಗೆ ಹೆಚ್ಚಿನ ಬೆಂಬಲ ನೀಡಲಿದ್ದಾರೆ ಎಂದರು.
ಈ ಚುನಾವಣೆ ರಾಷ್ಟ್ರೀಯ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ನಡೆಯುತ್ತಿರುವ ಚುನಾವಣೆಯಾಗಿದೆ. ಯಾವುದೇ ಕುಟುಂಬದ ವಿಷಯ, ವ್ಯಕ್ತಿಗಳ ವಿಷಯ ಹಾಗೂ ಟೀಕೆ- ಟಿಪ್ಪಣಿಗಳಿಗೆ ಮತದಾರರು ತಲೆ ಕೆಡಿಸಿಕೊಳ್ಳುವುದಿಲ್ಲ, ರಾಷ್ಟ್ರದ ರಕ್ಷಣೆ ಹಾಗೂ ಪ್ರತಿಯೊಬ್ಬ ಪ್ರಜೆಯ ರಕ್ಷಣೆಯನ್ನು ಮಾಡುವಂತಹ ಸರ್ಕಾರವನ್ನು ಆಯ್ಕೆ ಮಾಡಬೇಕೆಂಬುದು ಪ್ರತಿಯೊಬ್ಬ ಭಾರತೀಯನ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಮೋದಿ ನೇತೃತ್ವದ ಸರ್ಕಾರ ಮತ್ತೂಮ್ಮೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಶಾಸಕ ಎಸ್.ಎನ್.ಚನ್ನಬಸಪ್ಪ, ಮಾಜಿ ಕಾರ್ಪೋರೇಟರ್‌ಗಳಾದ ಆಶಾ ಚಂದ್ರಪ್ಪ, ಬೊಮ್ಮನಕಟ್ಟೆ ಮಾಲತೇಶ್ ಇನ್ನಿತರರ ಸಹಕಾರದಿಂದಾಗಿ ಬೊಮ್ಮನಕಟ್ಟೆ ಭಾಗದಲ್ಲಿ ಪ್ರತಿ ಮನೆ ಮನೆಗೆ ಭೇಟಿ ನೀಡಿ ಮತಯಾಚಿ ಸುವಂತಹ ಕೆಲಸ ಯಶಸ್ವಿಯಾಗಿದೆ ಎಂದರು. ಶಾಸಕ ಎಸ್.ಎನ್. ಚನ್ನಬಸಪ್ಪ, ಮೋಹನ್‌ರೆಡ್ಡಿ, ನಾಗರಾಜ್, ಸೋಮಶೇಖರ್ ಮತ್ತಿತರರು ಇದ್ದರು.