ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳಕ್ಕೆ ತೆರಳುತ್ತಿದ್ದ ಛತ್ತೀಸ್‌ಗಢದ ಭಕ್ತರಿದ್ದ ವಾಹನ ಅಪಘಾತಗೊಂಡಿದ್ದು, ಭಕ್ತರು ಸೇರಿದಂತೆ ಕನಿಷ್ಠ 10 ಜನರು ಮೃತಪಟ್ಟ ಘಟನೆ ನಡೆದಿದೆ.
ಮಿರ್ಜಾಪುರ-ಪ್ರಯಾಗ್‌ರಾಜ್ ಹೆದ್ದಾರಿಯಲ್ಲಿ ಬೊಲೆರೊ ಕಾರು ಬಸ್‌ಗೆ ಡಿಕ್ಕಿ ಹೊಡೆದಿದೆ. ಮಧ್ಯರಾತ್ರಿಯ ಸುಮಾರಿಗೆ ಸಂಭವಿಸಿದ ಅವಳಿ ಡಿಕ್ಕಿಯಲ್ಲಿ 19 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಭಕ್ತರು ಛತ್ತೀಸ್‌ಗಢದ ಕೋರ್ಬಾಗೆ ಸೇರಿದವರು. ಅವರು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಕುಂಭಕ್ಕೆ ಹೋಗುತ್ತಿದ್ದರು. ಅಪಘಾತದ ಸಮಯದಲ್ಲಿ ಬಸ್‌ನಲ್ಲಿ ಮಧ್ಯಪ್ರದೇಶದ ರಾಜ್‌ಗಢದ ಯಾತ್ರಿಕರು ಸಹ ಇದ್ದರು.
“ಛತ್ತೀಸ್‌ಗಢದಿಂದ ಮಹಾಕುಂಭಕ್ಕೆ ಭಕ್ತರನ್ನು ಕರೆದೊಯ್ಯುತ್ತಿದ್ದ ಕಾರು ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಹತ್ತು ಜನರು ಸಾವನ್ನಪ್ಪಿದ್ದಾರೆ. ಮಧ್ಯರಾತ್ರಿಯ ಸುಮಾರಿಗೆ ಪ್ರಯಾಗ್‌ರಾಜ್-ಮಿರ್ಜಾಪುರ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ವರೂಪ್ ರಾಣಿ ವೈದ್ಯಕೀಯ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಪ್ರಯಾಗ್‌ರಾಜ್ ಹೆಚ್ಚುವರಿ ಎಸ್‌ಪಿ ವಿವೇಕ್ ಚಂದ್ರ ಯಾದವ್ ತಿಳಿಸಿದ್ದಾರೆ.
ಪ್ರಯಾಗ್‌ರಾಜ್‌ನಲ್ಲಿ ಸಂಭವಿಸಿದ ರಸ್ತೆ ಅಪಘಾತದ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾಹಿತಿ ಪಡೆದಿದ್ದಾರೆ. ಅಧಿಕಾರಿಗಳಿಗೆ ಸ್ಥಳಕ್ಕೆ ತಲುಪಿ ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸುವಂತೆ ಸೂಚಿಸಿದರು.