ಮಂಡ್ಯ : ಇತ್ತೀಚಿಗಷ್ಟೇ ಮಂಡ್ಯದ ವಿಸಿ ನಾಲೆಯಲ್ಲಿ ಒಂದೇ ಕುಟುಂಬದ ಐವರು ಸಾವಿಗೀಡಾದ ಘಟನೆ ಮಾಸುವ ಮುನ್ನವೇ ಮಂಡ್ಯ ಜಿಲ್ಲೆಯ ಪಾಂಡವಪುರದ ಬನಘಟ್ಟದ ಬಳಿ ಮತ್ತೊಂದು ದುರಂತ ನಡೆದಿದೆ. ಚಾಲಕರ ನಿಯಂತ್ರಣ ತಪ್ಪಿ ವಿಸಿ ನಾಲೆಗೆ ಸ್ವಿಫ್ಟ್ ಕಾರು ಬಿದ್ದಿದೆ. ಕಾರಿನಲ್ಲಿ ನಾಲ್ವರು ಇರುವ ಶಂಕೆ ವ್ಯಕ್ತವಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ.
ಸಂಜೆ ೪.೪೫ರ ವೇಳೆಯಲ್ಲಿ ದುರಂತ ಜರುಗಿದೆ. ವಿಸಿ ನಾಲೆಗೆ ಇಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ. ನಿನ್ನೆಯಷ್ಟೆ ಕೆಆರ್‌ಎಸ್ ಡ್ಯಾಂನಿಂದ ವಿಸಿ ನಾಲೆಗೆ ನೀರು ಬಿಡಲಾಗಿತ್ತು. ತುಂಬಿದ ಕಾಲುವೆಗೆ ಕಾರು ಬಿದ್ದಿದೆ. ಕಾರಿನಲ್ಲಿದ್ದವರು ಯಾವ ಊರಿನವರು ಎಂಬುದು ತಿಳಿದುಬಂದಿಲ್ಲ. ಹೆಚ್ಚಿನ ಕಾರ್ಯಾಚರಣೆ ಮುಂದುವರೆದಿದ್ದು, ಸ್ಥಳಕ್ಕೆ ಮಂಡ್ಯ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ.