ನಾಸಿಕ್’ನ ಮನ್ಮಾಡ್-ಯೇವಾಲಾ ರಾಷ್ಟ್ರೀಯ ಹೆದ್ದಾರಿಯ ಅಂಕೈ ರೈಲ್ವೆ ಮೇಲ್ಸೇತುವೆಯಲ್ಲಿ ಕಾರು ಮತ್ತು ಕಂಟೈನರ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಐವರು ಸಾವನ್ನಪ್ಪಿರುವ ಘಟನೆ ಭಾನುವಾರ ಸಂಜೆ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟವರನ್ನು ರೋಹಿತ್ ಧನವತೆ, ಶ್ರೇಯಸ್ ಧನವತೆ, ಲಲಿತ್ ಸೋನಾವಾನೆ, ಗಣೇಶ್ ಸೋನಾವಾನೆ ಮತ್ತು ಪ್ರತೀಕ್ ನಾಯಕ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ನಾಸಿಕ್ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಐವರು ಯುವಕರು ಮನ್ಮಾಡ್ ಸಮೀಪದ ಕುಂದಲ್’ಗಾಂವ್’ನ ಮಹಸೋಬಾ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಊರಿಗೆ ಮರಳುತ್ತಿದ್ದಾಗ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಕಾರು ತೀವ್ರವಾಗಿ ಜಖಂಗೊಂಡಿದೆ. ಮೃತದೇಹಗಳನ್ನು ಮನ್ಮಾಡ್’ನ ಉಪಜಿಲಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಕಾರು ಮಹಾರಾಷ್ಟ್ರದ ನೋಂದಣಿ ಫಲಕವನ್ನು ಹೊಂದಿತ್ತು.
ಅಪಘಾತಕ್ಕೆ ಏನು ಕಾರಣ ಎನ್ನುವ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ರಸ್ತೆ ಮಧ್ಯದಲ್ಲಿಯೇ ಅಪಘಾತ ಸಂಭವಿಸಿದ್ದು, ಸಂಚಾರಕ್ಕೆ ಅಡ್ಡಿ ಉಂಟಾಗಿದೆ.